ರಾಜಕೀಯ ಪ್ರೇರಿತ ಬಂದ್‍ಗೆ ಜನರ ಬೆಂಬಲವಿಲ್ಲ: ಜೆಡಿಎಸ್ ಮುಖಂಡ ಕೆ.ಎಂ.ಗಣೇಶ್

ಮಡಿಕೇರಿಮಮೇ.27: ಬಿಜೆಪಿ ಮೇ 28 ರಂದು ಕರೆ ನೀಡಿರುವ ರಾಜಕೀಯ ಪ್ರೇರಿತ ಬಂದ್‍ಗೆ ಕೊಡಗಿನ ಜನತೆ ಬೆಂಬಲ ನೀಡುವುದಿಲ್ಲವೆಂದು ಜಾತ್ಯತೀತ ಜನತಾದಳದ ಪ್ರಚಾರ ಸಮಿತಿ ಅಧ್ಯಕ್ಷರಾದ ಕೆ.ಎಂ.ಗಣೇಶ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು ಬಿಜೆಪಿ ರಾಜ್ಯದಲ್ಲಿ ಅರಾಜಕತೆ ಸೃಷ್ಟಿ ಮಾಡುವುದಕ್ಕಾಗಿ ಕರ್ನಾಟಕ ಬಂದ್‍ಗೆ ಕರೆ ನೀಡಿದೆ ಎಂದು ಆರೋಪಿಸಿದ್ದಾರೆ.
ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದು ಮೂರು ದಿನಗಳಷ್ಟೆ ಕಳೆದಿದ್ದು, ಸಾಲಮನ್ನಾದ ಬಗ್ಗೆ ಆರ್ಥಿಕ ತಜ್ಞರೊಂದಿಗೆ ಸಮಾಲೋಚಿಸಿ ನಿರ್ಧಾರ ತೆಗೆದುಕೊಳ್ಳುವ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ಈಗಾಗಲೇ ಮುಖ್ಯಮಂತ್ರಿಗಳು ಕಾರ್ಯಪ್ರವೃತ್ತರಾಗಿದ್ದಾರೆ ಮತ್ತು ಸಾಲಮನ್ನಾ ಮಾಡುವ ಭರವಸೆ ನೀಡಿದ್ದಾರೆ. ಪರಿಸ್ಥಿತಿ ಹೀಗಿದ್ದರೂ ವಿಪಕ್ಷ ನಾಯಕರಾದ ಬಿ.ಎಸ್.ಯಡಿಯೂರಪ್ಪ ಅವರು ತಾನೊಬ್ಬ ಹೋರಾಟಗಾರನೆಂದು ಪ್ರತಿಬಿಂಬಿಸಿಕೊಳ್ಳುವ ಆತುರದಲ್ಲಿ ಜನರಿಗೆ ಅಗತ್ಯವಿಲ್ಲದ ಬಂದ್‍ಗೆ ಕರೆ ನೀಡಿದ್ದಾರೆ. ಇದು ರಾಜಕೀಯ ಪ್ರೇರಿತ ಹೋರಾಟವಾಗಿದ್ದು, ರೈತ ಸಂಘಟನೆಗಳು ಬಂದ್‍ಗೆ ಬೆಂಬಲ ನೀಡುವುದಿಲ್ಲವೆಂದು ಸ್ಪಷ್ಟಪಡಿಸಿವೆ. ಕೊಡಗಿನ ಜನರು ಕೂಡ ಬಂದ್‍ಗೆ ಬೆಂಬಲ ನೀಡುವುದಿಲ್ಲವೆಂದು ಗಣೇಶ್ ತಿಳಿಸಿದ್ದಾರೆ.
ಬಿಜೆಪಿ ಪ್ರತಿ ಚುನಾವಣೆ ಸಂದರ್ಭವೂ ಕೊಡಗಿನ ಬಾಣೆ ಜಮೀನಿನ ಸಮಸ್ಯೆ, ಡಾ.ಕಸ್ತೂರಿ ರಂಗನ್ ವರದಿ ವಿವಾದ ಸೇರಿದಂತೆ ಕೆಲವು ಜ್ವಲಂತ ಸಮಸ್ಯೆಗಳನ್ನು ಬಗೆಹರಿಸುವ ಭರವಸೆ ನೀಡುತ್ತಲೇ ಬರುತ್ತಿದೆ. ಅಲ್ಲದೆ ಕಳೆದ 20 ವರ್ಷಗಳಿಂದ ಬಿಜೆಪಿ ಪ್ರತಿನಿಧಿಗಳೇ ಜಿಲ್ಲೆಯನ್ನು ಪ್ರತಿನಿಧಿಸುತ್ತಾ ಬರುತ್ತಿದ್ದಾರೆ. ಆದರೆ ಕೊಡಗಿನ ಜನರನ್ನು ಕಾಡುತ್ತಿರುವ ಅನೇಕ ಸಮಸ್ಯೆಗಳು ಬಗೆಹರಿಯದೆ ಹಾಗೇ ಉಳಿದುಕೊಂಡಿವೆ. ದೇಶದ ಪರಿಸ್ಥಿತಿಯನ್ನು ಗಮನಿಸಿದರೆ ದಿನದಿಂದ ದಿನಕ್ಕೆ ಡೀಸೆಲ್, ಪೆಟ್ರೋಲ್, ತೈಲೋತ್ಪನ್ನಗಳು ಹಾಗೂ ದಿನಬಳಕೆಯ ವಸ್ತುಗಳ ಬೆಲೆ ಗಗನಕ್ಕೆ ಏರುತ್ತಿದೆ. ಕರ್ನಾಟಕ ರಾಜ್ಯದಲ್ಲಿ ಸಾಲು ಸಾಲು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದ ಸಂದರ್ಭ ದೇಶದ ಪ್ರಧಾನಮಂತ್ರಿಗಳು ರೈತರಿಗೆ ಆತ್ಮಸ್ಥೈರ್ಯ ತುಂಬುವ ಕಾರ್ಯವನ್ನು ಮಾಡಿಲ್ಲ. ಕೇಂದ್ರದ ಅರ್ಥಹೀನ ಆರ್ಥಿಕ ನಿಲುವುಗಳಿಂದ ರೈತರು ಮಾತ್ರವಲ್ಲದೆ ಜನಸಾಮಾನ್ಯರು ನಿತ್ಯ ಕಷ್ಟನಷ್ಟಗಳನ್ನು ಅನುಭವಿಸುತ್ತಿದ್ದಾರೆ ಎಂದು ಆರೋಪಿಸಿರುವ ಕೆ.ಎಂ.ಗಣೇಶ್ ಈ ವಿಚಾರಗಳ ಬಗ್ಗೆ ಬಿಜೆಪಿ ಬಂದ್‍ಗೆ ಕರೆ ನೀಡಿದರೆ ಬೆಂಬಲ ನೀಡುವುದಾಗಿ ಸ್ಪಷ್ಟಪಡಿಸಿದ್ದಾರೆ.
ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕೊಟ್ಟ ಮಾತನ್ನು ತಪ್ಪದೆ ರೈತರ ಪರವಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಿದ್ಧರಿದ್ದಾರೆ. ಸರ್ಕಾರ ಈಗಷ್ಟೆ ರಚನೆಯಾಗಿರುವುದರಿಂದ ಮತ್ತು ಮೈತ್ರಿ ಸರ್ಕಾರ ಅಧಿಕಾರದಲ್ಲಿರುವುದರಿಂದ ಸ್ಪಷ್ಟ ನಿರ್ಧಾರವನ್ನು ಪ್ರಕಟಿಸಲು ಮುಖ್ಯಮಂತ್ರಿಗಳಿಗೆ ಒಂದಷ್ಟು ಕಾಲವಕಾಶ ನೀಡಬೇಕಾಗುತ್ತದೆ. ಈ ಬಗ್ಗೆ ರಾಜ್ಯದ ಜನತೆಗೂ ಸಹಮತವಿದೆ. ಆದರೆ ರಾಜಕೀಯ ದುರುದ್ದೇಶದಿಂದ ಬಿಜೆಪಿ ಬಂದ್‍ಗೆ ಕರೆ ನೀಡಿದ್ದು, ಇದನ್ನು ಪ್ರತಿಯೊಬ್ಬರು ಖಂಡಿಸಬೇಕೆಂದು ಕೆ.ಎಂ.ಗಣೇಶ್ ಮನವಿ ಮಾಡಿದ್ದಾರೆ.







