ಎರಡು ಉಪ ಮುಖ್ಯಮಂತ್ರಿ ಸ್ಥಾನ ನೀಡಲು ಕನ್ನಡಪರ ಸಂಘಟನೆಗಳ ಒಕ್ಕೂಟ ಒತ್ತಾಯ

ಬೆಂಗಳೂರು, ಮೇ 27: ರಾಜ್ಯ ಸರಕಾರ ಹೈದರಾಬಾದ್ ಕರ್ನಾಟಕ ಹಾಗೂ ಉತ್ತರ ಕರ್ನಾಟಕ ಭಾಗದವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಕನ್ನಡಪರ ಸಂಘಟನೆಗಳ ಒಕ್ಕೂಟ ಒತ್ತಾಯಿಸಿದೆ.
ರವಿವಾರ ನಗರದ ಮೆಜೆಸ್ಟಿಕ್‌ನ ಬಿಎಂಟಿಸಿ ಬಸ್ ನಿಲ್ದಾಣದ ಬಳಿ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್, ಹಾಸಿಗೆ ಹಾಸಿಕೊಂಡು ಮಲಗಿ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಹೈ.ಕ, ಉ.ಕ.ಭಾಗದವರಿಗೆ ಡಿಸಿಎಂ ಸ್ಥಾನ ನೀಡಬೇಕೆಂದು ಮನವಿ ಮಾಡಿದರು.
ಹೈದರಾಬಾದ್ ಕರ್ನಾಟಕ ಹಾಗೂ ಉತ್ತರ ಕರ್ನಾಟಕವನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬಾರದು. ಹೈದರಾಬಾದ್ ಕರ್ನಾಟಕ, ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಎರಡು ಉಪಮುಖ್ಯಮಂತ್ರಿ ಸ್ಥಾನಗಳನ್ನು ನೇಮಕ ಮಾಡಬೇಕು. ಜೊತೆಗೆ ಹೈದರಾಬಾದ್ ಕರ್ನಾಟಕದ ಅಭಿವೃದ್ಧಿಯ ಬಗ್ಗೆ ಶ್ವೇತಪತ್ರ ಹೊರಡಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು, ಕನ್ನಡ ಸೇನೆಯ ಅಧ್ಯಕ್ಷ ಕೆ.ಆರ್.ಕುಮಾರ್, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರಾದ ಶಿವರಾಮೇಗೌಡ, ಪ್ರವೀಣ್‌ಕುಮಾರ್ ಶೆಟ್ಟಿ, ಕನ್ನಡ ಜಾಗೃತಿ ವೇದಿಕೆ ಅಧ್ಯಕ್ಷ ಮಂಜುನಾಥ್ ದೇವ, ಕನ್ನಡಪರ ಹೋರಾಟಗಾರ ಎಚ್.ವಿ.ಗಿರೀಶ್‌ಗೌಡ ಪಾಲ್ಗೊಂಡಿದ್ದರು.
ಬಂದ್ ಬೆಂಬಲಿಸಲ್ಲ
'ರೈತರ ಸಾಲಮನ್ನಾ ಮಾಡುವಂತೆ ಒತ್ತಾಯಿಸಿ ಮೇ 28ಕ್ಕೆ ಬಿಜೆಪಿ ಕರೆ ನೀಡಿರುವ ಬಂದ್ ಬಗ್ಗೆ ನಮಗೆ ಮಾಹಿತಿ ಇಲ್ಲ. ಹೀಗಾಗಿ, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪಕರೆ ನೀಡಿರುವ ಬಂದ್‌ನಲ್ಲಿ ಕನ್ನಡಪರ ಸಂಘಟನೆ ಒಕ್ಕೂಟ ಪಾಲ್ಗೊಳ್ಳುವುದಿಲ್ಲ’
-ವಾಟಾಳ್ ನಾಗರಾಜ್ ಕನ್ನಡಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ







