ಚಾ.ನಗರ: ಗ್ರಾಮೀಣ ಅಂಚೆ ನೌಕರರ ಪ್ರತಿಭಟನೆಗೆ ಸಂಸದ ಆರ್.ದ್ರುವನಾರಾಯಣ್ ಬೆಂಬಲ

ಚಾಮರಾಜನಗರ, ಮೇ. 27: ಗ್ರಾಮಾಂತರ ಪ್ರದೇಶಗಳ ಜನರಿಗೆ ಉತ್ತಮವಾದ ಸೇವೆಯನ್ನು ಸಲ್ಲಿಸುತ್ತಾ ಬಂದಿರುವ ಗ್ರಾಮೀಣ ಅಂಚೆ ನೌಕರರ ಬಹಳ ದಿನಗಳ ಬೇಡಿಕೆಗಳ ಈಡೇರಿಸುವ ನಿಟ್ಟಿನಲ್ಲಿ ಕೇಂದ್ರ ಸಚಿವರನ್ನು ಭೇಟಿ ಮಾಡಿ ಕಮಲೇಶ್ ವರದಿ ಜಾರಿ ಸೇರಿದಂತೆ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಹೆಚ್ಚಿನ ಪ್ರಯತ್ನ ಮಾಡುವುದಾಗಿ ಸಂಸದ ಆರ್.ದ್ರುವನಾರಾಯಣ್ ಪ್ರತಿಭಟನಾ ನಿರತ ನೌಕರರಿಗೆ ಬೆಂಬಲ ಸೂಚಿಸಿದರು.
ನಗರದ ಸಂತೇಮರಹಳ್ಳಿ ರಸ್ತೆಯಲ್ಲಿರುವ ಕೇಂದ್ರ ಅಂಚೆ ಕಚೇರಿಯ ಮುಂಭಾಗ ಗ್ರಾಮೀಣ ಅಂಚೆ ನೌಕರರು ಕಮಲೇಶ್ ಚಂದ್ರ ಸಮಿತಿ ವರದಿ ಅನುಷ್ಠಾನಗೊಳಿಸುವಂತೆ ಕಳೆದ 5 ದಿನಗಳಿಂದ ನಡೆಯುತ್ತಿರುವ ಧರಣಿ ಸ್ಥಳಕ್ಕೆ ಶನಿವಾರ ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿ, ಅವರ ಅಹವಾಲು ಸ್ವೀಕರಿಸಿ ಮಾತನಾಡಿದರು.
ಬಹಳ ದಿನಗಳಿಂದ ಬೇಡಿಕೆ ಈಡೇರಿಕೆಗಾಗಿ ಪ್ರತಿಭಟನೆ ಮಾಡುತ್ತಾ ಬಂದಿದ್ದು, ಕಳೆದ ಯುಪಿಎ ಸರ್ಕಾರ ಅವಧಿಯಲ್ಲಿ ಕೇಂದ್ರ ಸಚಿವರಾಗಿದ್ದ ಎ. ರಾಜಾ ಅವರನ್ನು ನಾನು ಸಹ ಭೇಟಿ ಮಾಡಿಸಿದ್ದೆ. ಅವರಿಂದ ಸಂದರ್ಶನಕ್ಕೆ ಅವಕಾಶ ಮಾಡಿಕೊಡುವ ಜೊತೆಗೆ ಸರ್ಕಾರ ಮಟ್ಟದಲ್ಲಿ ಪ್ರಗತಿಯಾಗುವಂತೆ ನೋಡಿಕೊಂಡಿದ್ದೆ. ಈಗ ಕಮಲೇಶ್ ಚಂದ್ರ ವರದಿ ಜಾರಿ ಪ್ರಮುಖ ಒತ್ತಾಯವಾಗಿದ್ದು, ಸದನದಲ್ಲಿ ಈ ಬಗ್ಗೆ ಪ್ರಶ್ನೆ ಮಾಡುವ ಜೊತೆಗೆ ಸಂಬಂಧಪಟ್ಟ ಸಚಿವರಿಗೆ ತಮ್ಮ ಮನವಿಯ ಜೊತೆಗೆ ನಾನು ಕೂಡಾ ಪತ್ರವನ್ನು ಬರೆದು ಒತ್ತಾಯಿಸುತ್ತೇನೆ ಎಂದು ಭರವಸೆ ನೀಡಿದರು.
ಜೂ. 5 ರಿಂದ ದೆಹಲಿಯಲ್ಲಿ ಆಧೀವೇಶನ ಆರಂಭವಾಗುತ್ತದೆ. ಈ ಸಂದರ್ಭದಲ್ಲಿ ಅಂಚೆ ಇಲಾಖೆಯ ಸಚಿವರು ಹಾಗೂ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಗ್ರಾಮೀಣ ಅಂಚೆ ನೌಕರರ ಬೇಡಿಕೆಗಳ ಬಗ್ಗೆ ಚರ್ಚೆ ಮಾಡುತ್ತೇನೆ. ಸಂಘದ ಪದಾಧಿಕಾರಿಗಳು ದೆಹಲಿಗೆ ಬರುವುದಾದರೆ, ಸಚಿವರು ಹಾಗೂ ಹಿರಿಯ ಅಧಿಕಾರಿಗಳ ಭೇಟಿ ಮಾಡಿಸುವ ಜವಾಬ್ದಾರಿ ನನ್ನದು. ನಿಮ್ಮ ಹೋರಾಟಕ್ಕೆ ನಮ್ಮ ಬೆಂಬಲ ಸದಾ ಇರುತ್ತದೆ ಎಂದು ಧ್ರುವನಾರಾಯಣ್ ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಎಸ್.ಬಾಲರಾಜ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ.ಮರಿಸ್ವಾಮಿ, ಜಿ.ಪಂ.ಸದಸ್ಯ ಸದಾಶಿವಮೂರ್ತಿ, ಎಪಿಎಂಸಿ ಅಧ್ಯಕ್ಷ ಬಿ.ಕೆ.ರವಿಕುಮಾರ್, ಮಾಜಿ ಅಧ್ಯಕ್ಷ ಆಲ್ದೂರು ರಾಜಶೇಖರ್, ಮುಖಂಡರಾದ ನಾಗವಳ್ಳಿ ನಾಗಯ್ಯ, ವೀರಭದ್ರಸ್ವಾಮಿ, ಅಪ್ತ ಸಹಾಯಕ ನಾಗೇಶ್ ಇದ್ದರು.
ಧರಣಿಯಲ್ಲಿ ನೌಕರ ಸಂಘದ ವಿಭಾಗೀಯ ಕಾರ್ಯದರ್ಶಿ ಎಂ.ಡಿ.ಶಿವಣ್ಣ, ಮಹೇಶ್‍ಪಾಳ್ಯ, ಎನ್‍ಯುಜಿಡಿಎಸ್ ಕಾರ್ಯದರ್ಶಿ ಮಾದೇಶ್‍ಮಂಚಾಪುರ, ಬಿ.ಶೇಖಣ್ಣ, ಶಾಂತೇಶ್, ಮಾಳಿಗಯ್ಯ, ರಾಘವೇಂದ್ರ, ರಾಜರಾಂ, ಮಹದೇವಯ್ಯ, ವಿಭಾಗೀಯ ಸಂಘಟನೆಯ ಸಂಯೋಜಕ ರೇವಣ್ಣಸಿದ್ದಪ್ಪ, ನಿಜಲಿಂಗಮೂರ್ತಿ, ಹರವೆ ಪರಶಿವಪ್ಪ, ಕಲ್ಪುರ ರಾಜಣ್ಣ, ಹರವೆ ರಾಜಪ್ಪ, ಗುರುಲಿಂಗಪ್ಪ, ಶ್ರೀಕಂಠಮೂರ್ತಿ, ಸಂಪತ್ತು, ಗಾಯಿತ್ರಿದೇವಿ. ಉಮಾ, ರಾಜಮ್ಮ, ಸೌಮ್ಯ, ಶೋಭಾ, ಮಾದೇಶ್, ಪ್ರಕಾಶ್, ಚಂದ್ರು, ಅಂತೋಣಿಕುಮಾರ್, ಮುರಳಿ, ಶರವಣನ್, ರಂಗಸ್ವಾಮಿ, ಮಹದೇವಸ್ವಾಮಿ, ರಾಜೇಂದ್ರ, ಮಲ್ಲಿಕಾರ್ಜನ ಸೇರಿದಂತೆ ನೂರಾರು ನೌಕರರು ಭಾಗವಹಿಸಿದ್ದರು.







