ತುಮಕೂರು: ಸ್ಮಾರ್ಟ್‍ಸಿಟಿಯಲ್ಲಿ ನಗರ ಬಡಜನರ ಮುನ್ನೋಟ ಸಮಾಲೋಚನೆ ಸಭೆ

ತುಮಕೂರು.ಮೇ.27: ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಸ್ಮಾರ್ಟ್‍ಸಿಟಿ ಕಂಪೆನಿಯಂತಹ ಅಪ್ರಜಾಪ್ರಭುತ್ವದ ಆಡಳಿತ ನುಸುಳುವುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಜನಪರ ಚಿಂತಕ ಕೆ.ದೊರೈರಾಜ್ ಕಳವಳ ವ್ಯಕ್ತಪಡಿಸಿದ್ದಾರೆ.
ನಗರದ ಎನ್‍ಆರ್ ಕಾಲೋನಿಯ ಸಮುದಾಯ ಶೈಕ್ಷಣಿಕ ಭವನದಲ್ಲಿ ಜಿಲ್ಲಾ ಕೊಳೆಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಸ್ಮಾರ್ಟ್‍ಸಿಟಿಯಲ್ಲಿ ನಗರ ಬಡಜನರ ಮುನ್ನೋಟ ಸಮಾಲೋಚನೆ ಸಭೆಯಲ್ಲಿ ಮಾತನಾಡುತಿದ್ದ ಅವರು, ಕಂಪೆನಿಗಳು ಸರಕಾರದ ನಿಯಂತ್ರಣದಲ್ಲಿ ಬರುವುದಿಲ್ಲ. ಸಲಹಾ ಸಮಿತಿಯ ಸಲಹೆಗಳನ್ನು ತೆಗೆದುಕೊಳ್ಳುವುದಿಲ್ಲ. ಇದಕ್ಕೆ ಹೊಣೆ ಯಾರು ಎಂದು ಪ್ರಶ್ನಿಸಿದರು.
ಸ್ಮಾರ್ಟ್‍ಸಿಟಿ ಇದುವರೆಗೆ ಏನು ಮಾಡಿದೆ. ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳು ಮತ್ತು ಅದರ ಚಟುವಟಿಕೆಗಳ ಕುರಿತು ಕೂಡಲೇ ಜನರಿಗೆ ಮಾಹಿತಿ ನೀಡಬೇಕು. ಜನರ ಸಹಭಾಗಿತ್ವ ಎಂದ ಮೇಲೆ ಜನರಿಗೆ ಮಾಹಿತಿ ನೀಡುವುದು ಸ್ಮಾರ್ಟ್‍ಸಿಟಿ ಕಂಪನಿಯ ಜವಾಬ್ದಾರಿ. ಹೀಗಾಗಿ ನಾಗರಿಕ ಸಮಿತಿಗಳು ಸೇರಿದಂತೆ ಜನರ ಮುಂದೆ ಸ್ಮಾರ್ಟ್ ಸಿಟಿ ಯೋಜನೆಯ ಅಂಶಗಳನ್ನು ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು.
ಜನರ ಅದ್ಯತೆ ವಸ್ತುಗಳಾದ ವಸತಿ, ನಿವೇಶನ, ಕುಡಿಯುವ ನೀರು,ಕೊಳಗೇರಿ ನಿವಾಸಿಗಳ ಅಭಿವೃದ್ಧಿ, ಬೀದಿ ಬದಿ ವ್ಯಾಪಾರಿಗಳ ರಕ್ಷಣೆ ಮತ್ತು ಉದ್ಯೋಗದ ಕುರಿತು ಸ್ಮಾರ್ಟ್‍ಸಿಟಿ ಕಂಪನಿ ಜನರಿಗೆ ಸ್ಪಷ್ಟೀಕರಣ ನೀಡಬೇಕು. ಜನರಲ್ಲಿ ಇಂತಹ ಕಂಪನಿಗಳ ಅಪ್ರಜಾತಾಂತ್ರಿಕ ವಿಷಯಗಳನ್ನು ಮನವರಿಕೆ ಮಾಡಬೇಕು. ಹೋರಾಟಗಳನ್ನು ನಡೆಸಬೇಕು. ಇಲ್ಲದಿದ್ದರೆ ನಾವು ಏನನ್ನೂ ಮಾಡಲು ಆಗುವುದಿಲ್ಲ. ಜನರು ಸಂಘಟಿಸಿ ಹೋರಾಟ ಮಾಡುವುದೇ ನಮ್ಮ ಮುಂದಿರುವ ದಾರಿ ಎಂದರು.
ಸಾಮಾಜಿಕ ಹೋರಾಟಗಾರ ಕುಂದರನಹಳ್ಳಿ ರಮೇಶ್ ಮಾತನಾಡಿ, ಇದುವರೆಗೂ ಸ್ಮಾರ್ಟ್‍ಸಿಟಿ ಕಂಪನಿ ಸಲಹಾ ಸಮಿತಿ ಸದಸ್ಯರ ಸಮಿತಿಯನ್ನು ಕರೆದಿಲ್ಲ. ಹೋಗಿ ಕೇಳಿದರೆ ಸಲಹಾ ಸಮಿತಿ ಇದೆಯೇ ಎಂದು ಪ್ರಶ್ನಿಸುತ್ತಾರೆ. ಎಸ್‍ಪಿವಿ ಆದ ಮೇಲೆ ನಾವು ಕೊಟ್ಟ ಕೆಲವು ಸಲಹೆಗಳನ್ನು ಮಾತ್ರ ಪಡೆದುಕೊಂಡು ಉಳಿದವುಗಳನ್ನು ಕೈಬಿಟ್ಟಿದೆ. ಇದು ತೃಪ್ತಿದಾಯಕ ವಿಷಯ. ಆದರೆ ಸ್ಮಾರ್ಟ್‍ಸಿಟಿ ಏನು ಮಾಡುತ್ತಿದೆ ಎಂಬುದು ಶಾಸಕರು, ಸಂಸದರು, ಮಹಾಪೌರರು ಮತ್ತು ಜಿಲ್ಲಾಧಿಕಾರಿಗಳಿಗೇ ತಿಳಿದಿಲ್ಲ ಎಂದರು.
ಒಂದೊಂದು ವಿಷಯವನ್ನು ಕೈಗೆತ್ತಿಕೊಂಡು ಅಧಿಕಾರಿಗಳ ಹಿಂದೆ ಬೀಳಬೇಕು. ಯಾವ ಕೆಲಸ ಆಗಿಲ್ಲ ಅದನ್ನು ಪ್ರಶ್ನೆ ಮಾಡಬೇಕು. ಪ್ರತಿ 15 ದಿನಕ್ಕೊಮ್ಮೆ ಶಾಸಕರೊಂದಿಗೆ ಸಭೆ ನಡೆಸಬೇಕು. ಪ್ರತಿ ಸಭೆಯಲ್ಲೂ ಒಂದೆರಡು ವಿಷಯಗಳನ್ನು ಇಟ್ಟುಕೊಂಡು ಅದರ ಬಗ್ಗೆ ಚರ್ಚೆ ನಡೆಸಬೇಕು. ಹೀಗೆ ಚರ್ಚೆ ಮಾಡುವುದರಿಂದ ಸಾಕಷ್ಟು ಕೆಲಸಗಳನ್ನು ಮಾಡಲು ಸಾಧ್ಯವಾಗುತ್ತದೆ. ಜನರಿಗೂ ಮಾಹಿತಿ ರವಾನೆಯಾದಂತೆ ಆಗುತ್ತದೆ ಎಂದು ಹೇಳಿದರು.
ಪರಿಸರ ಹೋರಾಟಗಾರ ಸಿ.ಯತಿರಾಜು ಮಾತನಾಡಿ, ಜನಸಂಖ್ಯೆಗೆ ಅನುಗುಣವಾಗಿ ಗಿಡಮರಗಳಿಲ್ಲ. ಕೆಲವೊಂದು ರಸ್ತೆಯಲ್ಲಿ ಗಿಡಗಳನ್ನು ಹಾಕಲು ಜಾಗವೇ ಇಲ್ಲ. ತುಮಕೂರು ನಗರದಲ್ಲಿ ಪರಿಸರ ಹದಗೆಟ್ಟಿದೆ. ವಾಯು ಮಾಲಿನ್ಯ ಅಧಿಕವಾಗಿದೆ. ಹಾಗಾಗಿ ನರಗದಲ್ಲಿ ಎಲ್ಲಿ ಸಸಿಗಳನ್ನು ಹಾಕಲು ಸಾಧ್ಯವಿದೆ ಎಂಬ ಬಗ್ಗೆ ಸ್ಮಾರ್ಟ್‍ಸಿಟಿಯವರು ಸ್ಪಷ್ಟಪಡಿಸಬೇಕು ಎಂದು ಹೇಳಿದರು
ಸ್ಲಂ ಜನಾಂದೋಲನ ಸಂಚಾಲಕ ಎ.ನರಸಿಂಹಮೂರ್ತಿ ಮಾತನಾಡಿ, ಸ್ಮಾರ್ಟ್‍ಸಿಟಿ ಯೋಜನೆಯಡಿ ತುಮಕೂರು ನಗರದ 11ರಷ್ಟು ಭಾಗ ಮಾತ್ರ ಬರುತ್ತದೆ. ಈ ಸ್ಮಾರ್ಟ್‍ಸಿಟಿ ಅಭಿವೃದ್ಧಿಯಾದ ಮೇಲೆ ನಗರದ ಎಲ್ಲಾ ವರ್ಗದ ಜನರೂ ಕೂಡ ತೆರಿಗೆ ಕಟ್ಟಬೇಕಾಗುತ್ತದೆ ಎಂದರು.
ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್ ಮಾತನಾಡಿ, ಸ್ಮಾರ್ಟ್‍ಸಿಟಿ ಕಲ್ಪನೆಯೇ ಜನವಿರೋಧಿಯಾದುದು. ಜನರ ಮೇಲೆ ತೆರಿಗೆಯನ್ನು ಹೇರುವ ಕೆಲಸ ನಡೆಯುತ್ತದೆ. ಕುಡಿಯುವ ನೀರು ವಿದ್ಯುತ್ ಮೊದಲಾದ ವಿಷಯಗಳ ಕುರಿತು ಯಾರೂ ಪ್ರಶ್ನೆ ಮಾಡದಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಹಾಗಾಗಿ ಸ್ಮಾರ್ಟ್‍ಸಿಟಿ ಯೋಜನೆಯು ಜನರಿಗೆ ಬಾಧ್ಯಸ್ಥರಾಗಿರಬೇಕು. ಬೀದಿಬದಿ ವ್ಯಾಪಾರಿಗಳ ಪ್ರಶ್ನೆ, ಕೊಳಗೇರಿಗಳ ಪ್ರಶ್ನೆ ಬಗ್ಗೆ ಸ್ಪಷ್ಟೀಕರಣ ಬೇಕು ಎಂದು ಆಗ್ರಹಿಸಿದರು.
ಸಭೆಯಲ್ಲಿ ನಿವೃತ್ತ ಪ್ರಾಂಶುಪಾಲ ಜಿ.ಎಂ.ಶ್ರೀನಿವಾಸಯ್ಯ, ನಿವೃತ್ತ ಇಂಜಿನಿಯರ್ ರಾಮಚಂದ್ರಯ್ಯ, ಸಮುದಾಯ ಜಿಲ್ಲಾ ಕಾರ್ಯದರ್ಶಿ ಕೆ.ಈ.ಸಿದ್ದಯ್ಯ, ತುಮಕೂರು ವಿವಿಯ ಅಂಬೇಡ್ಕರ್ ಅಧ್ಯಯನ ಕೇಂದ್ರದ ಮುಖ್ಯಸ್ಥ ಡಾ.ರಮೇಶ್, ಎಸ್.ಎಫ್.ಐ ಜಿಲ್ಲಾಧ್ಯಕ್ಷ ಈ.ಶಿವಣ್ಣ, ಪ್ರಾಧ್ಯಾಪಕ ನಾಗಭೂಷಣ್ ಬಗ್ಗನಡು,ಯುವಜನ ಮುಖಂಡ ಸುನಿಲ್ ಮೊದಲಾದವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಔಷಧಿ ವ್ಯಾಪಾರಿ ಸಂಘದ ಪಂಡಿತ್ ಜವಾಹರ್, ಕೊಳಗೇರಿ ಸಮಿತಿಯ ಶೆಟ್ಟಾಳಯ್ಯ, ಅರುಣ್, ರಘು, ಕೆಂಪರಾಜು, ಮಾದಿಗ ಪ್ರಚಾಂದೋಲನಾ ಸಮಿತಿಯ ಕುಮಾರ್ ಮಾದರ್, ಟಿ.ಸಿ.ರಾಮಯ್ಯ ಸಿಐಟಿಯು ಮುಖಂಡ ಷಣ್ಮುಖಪ್ಪ, ರಂಗಧಾಮಯ್ಯ, ಎಐಟಿಯುಸಿ ಮುಖಂಡ ಗಿರೀಶ್ ಮೊದಲಾದವರು ಹಾಜರಿದ್ದರು.







