ಮೇ 29: ಹೊಸಂಗಡಿ ಮಳ್‌ಹರ್‌ನಲ್ಲಿ ಕುರ್‌ಆನ್ ಸ್ಪರ್ಧೆ
ಮಂಜೇಶ್ವರ, ಮೇ 27: ಎಸ್ಸೆಸ್ಸೆಫ್ ಕಾಸರಗೋಡು ಜಿಲ್ಲಾ ಸಮಿತಿಯ ವತಿಯಿಂದ ‘ಪವಿತ್ರ ಕುರ್‌ಆನ್ ಕರೆಯುತ್ತಿದೆ’ ಎಂಬ ಘೋಷ ವಾಕ್ಯದಡಿ ಮೇ 29ರಂದು ಜಿಲ್ಲಾ ಮಟ್ಟದ ಕುರ್‌ಆನ್, ಹಿಫ್ಲ್ ಸ್ಪರ್ಧೆಯು ಹೊಸಂಗಡಿ ಮಳ್‌ಹರ್‌ನಲ್ಲಿ ನಡೆಯಲಿದೆ ಎಂದು ಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷ ಅಬ್ದುಲ್ ಜಬ್ಬಾರ್ ಸಖಾಫಿ ಪಾತೂರು ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.
ಅಂದು ಬೆಳಗ್ಗೆ 9ಕ್ಕೆ ಮಳ್‌ಹರ್ ಕ್ಯಾಂಪಸ್‌ನಲ್ಲಿ ನಡೆಯುವ ಕಾಂರ್ುಕ್ರಮವನ್ನು ಸಯ್ಯದ್ ಕೆ.ಎಸ್.ಆಟಕ್ಕೋಯ ತಂಙಳ್ ಕುಂಬೋಳ್ ಉದ್ಘಾಟಿಸುವರು. ಎಸ್ಸೆಸ್ಸೆಫ್ ಕಾಸರಗೋಡು ಜಿಲ್ಲಾಧ್ಯಕ್ಷ ಅಬ್ದುಲ್ ಜಬ್ಬಾರ್ ಸಖಾಫಿ ಪಾತೂರು ಅಧ್ಯಕ್ಷತೆ ವಹಿಸುವರು.
ಸ್ಪರ್ಧೆಯು ಕಿರಿಯ, ಹಿರಿಯ ಮಟ್ಟದಲ್ಲಿ ನಡೆಯಲಿದೆ. ಅಪರಾಹ್ನ 3 ಗಂಟೆಗೆ ನಡೆಯುವ ಸಮಾರೋಪ ಸಮಾರಂಭವನ್ನು ಎಸ್‌ವೈಎಸ್ ಜಿಲ್ಲಾಧ್ಯಕ್ಷ ಸಯ್ಯದ್ ಪಿ.ಎಸ್.ಆಟಕ್ಕೋಯ ತಂಙಳ್ ಪಂಜಿಕ್ಕಲ್ ಉದ್ಘಾಟಿಸುವರು.
ಸಯ್ಯದ್ ಶಾಹಿರ್ ಅಲ್ ಬುಖಾರಿ ತಂಙಳ್ ವಿಜೇತರಿಗೆ ಬಹುಮಾನಗಳನ್ನು ವಿತರಿಸುವರು ಎಂದವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಎಸ್ಸೆಸ್ಸೆಫ್ ಜಿಲ್ಲಾ ಕಾರ್ಯದರ್ಶಿ ಜಾಫರ್ ಸ್ವಾದಿಕ್ ಆವಳ , ಉಮರ್ ಫಾರೂಕ್ ಪೊಸೋಟ್ ಉಪಸ್ಥಿತರಿದ್ದರು.







