‘ಪೂರ್ಣಾವಧಿ ಮುಖ್ಯಮಂತ್ರಿ’ ಬಗ್ಗೆ ಚರ್ಚೆ ಇನ್ನೂ ಅಂತಿಮವಾಗಿಲ್ಲ: ಸಿದ್ದರಾಮಯ್ಯ

ಹೊಸದಿಲ್ಲಿ/ಬೆಂಗಳೂರು, ಮೇ 27: ಎಚ್.ಡಿ.ಕುಮಾರಸ್ವಾಮಿ 5 ವರ್ಷ ನಾನೇ ಪೂರ್ಣಾವಧಿ ಮುಖ್ಯಮಂತ್ರಿಯೆಂದು ಹೇಳುತ್ತಿದ್ದಾರೆ. ಆದರೆ, ‘ಪೂರ್ಣಾವಧಿ ಮುಖ್ಯಮಂತ್ರಿಯಾಗಿ ಮುಂದುವರಿಯುವ ಬಗ್ಗೆ ಚರ್ಚೆ ಇನ್ನೂ ಅಂತಿಮವಾಗಿಲ್ಲ’ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ನೂತನ ಸಚಿವ ಸಂಪುಟ ರಚನೆ ಸಂಬಂಧ ಒಂದು ಕಡೆ ಹಗ್ಗ ಜಗ್ಗಾಟದ ಮುಂದುವರಿದಿದೆ. ಈ ಮಧ್ಯೆಯೇ, ಮತ್ತೊಂದೆಡೆ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಸರಕಾರಕ್ಕೆ ಮುಖ್ಯಮಂತ್ರಿ ಹುದ್ದೆ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.
ಈ ನಡುವೆಯೇ ‘ಹಣಕಾಸು ಖಾತೆಗಾಗಿ ಕಾಂಗ್ರೆಸ್ ಪಟ್ಟು ಹಿಡಿದಿದೆ. ಆದರೆ, ಸಚಿವ ಸಂಪುಟ ರಚನೆ ಸಂಬಂಧ ಕಾಂಗ್ರೆಸ್ ಹಾಗೂ ಜೆಡಿಎಸ್ ಮಧ್ಯೆ ಯಾವುದೇ ಬಿಕ್ಕಟ್ಟು ಸೃಷ್ಟಿಯಾಗಿಲ್ಲ. ಈ ಬಗ್ಗೆ ಉಭಯ ನಾಯಕರು ಕೂತು ಚರ್ಚೆ ಮಾಡುತ್ತೇವೆ’ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.
ಸಿದ್ದರಾಮಯ್ಯ, ಕುಮಾರಸ್ವಾಮಿ ಸೇರಿ ಇನ್ನಿತರ ಮುಖಂಡರ ಹೇಳಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಸರಕಾರದಲ್ಲಿ ‘ಎಲ್ಲವೂ ಸರಿಯಾಗಿಲ್ಲ’ ಎಂಬುಂದತೂ ಸ್ಪಷ್ಟ. ಈ ಗೊಂದಲಗಳ ಮಧ್ಯೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಿದೇಶ ಪ್ರವಾಸ ಕೈಗೊಂಡಿದ್ದು ಸಚಿವ ಸಂಪುಟ ರಚನೆ ಇನ್ನೂ ನಾಲ್ಕೈದು ದಿನಗಳ ಮಟ್ಟಿಗೆ ಮುಂದೂಡಲ್ಪಟ್ಟಿದೆ.
ಹೀಗಾಗಿ ಸಚಿವ ಸಂಪುಟ ಸೇರ್ಪಡೆಯಾಗುವ ತವಕದಲ್ಲಿದ್ದ ಆಕಾಂಕ್ಷಿಗಳಿಗೆ ನಿರಾಸೆ ಮೂಡಿಸಿದೆ. ಜೂನ್ 1ರ ನಂತರ ರಾಹುಲ್ ಗಾಂಧಿ ಅಮೆರಿಕ ಪ್ರವಾಸದಿಂದ ಹಿಂದಿರುಗಲಿದ್ದು, ಆ ಬಳಿಕ ಮತ್ತೊಂದು ಸುತ್ತಿನ ಚರ್ಚೆಯ ನಂತರ ಸಂಪುಟ ರಚನೆ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆಗಳಿವೆ.
ಸಚಿವ ಸಂಪುಟದ ಸ್ಥಾನಗಳ ಹಂಚಿಕೆಯ ಬಗ್ಗೆ ಯಾವುದೇ ಗೊಂದಗಳಿಲ್ಲ ಎಂದು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಮುಖಂಡರು ಹೇಳುತ್ತಿದ್ದಾರೆ. ಆದರೆ, ಹಣಕಾಸು, ಗೃಹ, ಇಂಧನ, ಲೋಕೋಪಯೋಗಿ, ಕಂದಾಯ, ಜಲಸಂಪನ್ಮೂಲ, ಅಬಕಾರಿ ಸೇರಿದಂತೆ ಪ್ರಮುಖ ಖಾತೆಗಳಿಗಾಗಿ ಉಭಯ ಪಕ್ಷಗಳ ನಾಯಕರ ಮಧ್ಯೆ ಪೈಪೋಟಿ ಏರ್ಪಟ್ಟಿದೆ.
ಉಪ ಮುಖ್ಯಮಂತ್ರಿ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಇಂಧನ ಖಾತೆ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನ ನನಗೆ ನೀಡಬೇಕೆಂದು ಕಾಂಗ್ರೆಸ್ ವರಿಷ್ಠರ ಬಳಿ ಬೇಡಿಕೆಯನ್ನಿಟ್ಟಿದ್ದಾರೆ. ಈ ಮಧ್ಯೆ ಜೆಡಿಎಸ್ ನಾಯಕ ಎಚ್.ಡಿ.ರೇವಣ್ಣ ತನಗೂ ಇಂಧನ ಖಾತೆಯನ್ನೇ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆಂದು ಹೇಳಲಾಗಿದೆ.
ಈ ಬೆಳವಣಿಗೆಗಳ ಮಧ್ಯೆಯೇ ರೈತರ ಸಾಲಮನ್ನಾ ಮಾಡಲು ಆಗ್ರಹಿಸಿ ಬಿಜೆಪಿ ಕರ್ನಾಟಕ ಬಂದ್ ಕರೆ ನೀಡಿದ್ದು, ಒಂದು ವೇಳೆ ಮೈತ್ರಿಕೂಟ ಸರಕಾರದಿಂದ ‘ಸಾಲಮನ್ನಾ ಘೋಷಣೆ’ ಮಾಡಿದರೆ, ಅದರ ಲಾಭ ಕಾಂಗ್ರೆಸ್ಸಿಗೋ ಅಥವಾ ಜೆಡಿಎಸ್‌ಗೋ ಎಂಬ ಚರ್ಚೆಯೂ ಆರಂಭವಾಗಿದೆ.
ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಸರಕಾರಕ್ಕೆ ಆರಂಭದಲ್ಲೇ ಸಂಪುಟ ರಚನೆ, ಖಾತೆಗಳ ಹಂಚಿಕೆ, ರೈತರ ಸಾಲಮನ್ನಾ ಸೇರಿದಂತೆ ಹಲವು ಸಮಸ್ಯೆಗಳು ಎದುರಾಗಿದ್ದು, ಉಭಯ ಪಕ್ಷಗಳ ನಾಯಕರು ಇವುಗಳನ್ನೆಲ್ಲ ಹೇಗೆ ಪರಿಹರಿಸಿಕೊಳ್ಳಲಿದ್ದಾರೆಂಬುದು ಕುತೂಹಲ ಮೂಡಿಸಿದೆ.
‘ಕುಮಾರಸ್ವಾಮಿ ಪೂರ್ಣಾವಧಿ ಸಿಎಂ ಆಗಿ ಮುಂದುವರಿಯುವ ಬಗ್ಗೆ ಇನ್ನೂ ಚರ್ಚೆಯಾಗಿಲ್ಲ. ಖಾತೆ ಹಂಚಿಕೆ ಬಗ್ಗೆಯೂ ಚರ್ಚೆಯಾಗಬೇಕಿದೆ. ಈ ಬಗ್ಗೆ ಕುಮಾರಸ್ವಾಮಿ ಹಾಗೂ ಪರಮೇಶ್ವರ್ ಚರ್ಚೆ ನಡೆಸಲಿದ್ದು, ಅಗತ್ಯವಿದ್ದರೆ ನಾನು ಅವರೊಂದಿಗೆ ಚರ್ಚಿಸುವೆ. ಹೊಸಬರಿಗೆ ಸಂಪುಟದಲ್ಲಿ ಅವಕಾಶ ನೀಡಬೇಕೆಂಬ ಒತ್ತಡವಿದ್ದು, ಹೈಕಮಾಂಡ್ ಜತೆ ಚರ್ಚಿಸಿ ತೀರ್ಮಾನಿಸಲಾಗುವುದು’
-ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ







