ಬಿಜೆಪಿಯಿಂದ ಜನ ವಿರೋಧಿ ನಿಲುವು: ಕಾಂಗ್ರೆಸ್
ಉಡುಪಿ, ಮೇ 27: ಮುಖ್ಯಮಂತ್ರಿ ಕುಮಾರಸ್ವಾಮಿ ರೈತರ ಸಾಲಮನ್ನಾ ಮಾಡದಿದ್ದರೆ ಸೋಮವಾರ ಕರ್ನಾಟಕ ಬಂದ್ ಆಚರಿಸಲಾಗುವುದು ಎಂಬ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪಹೇಳಿಕೆ ಜನವಿರೋಧಿಯಾಗಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಆರೋಪಿಸಿದೆ.
ವಿಶ್ವಾಸಮತ ಗಳಿಸುವಲ್ಲಿ ವಿಫಲತೆಯಿಂದಾಗಿ ಬಿಜೆಪಿ, ಮೈತ್ರಿ ಸರಕಾರದ ಮೇಲೆ ಸೇಡಿನ ಮನೋಭಾವ ಹೊಂದಿದೆ. ಜೆಡಿಎಸ್ ಸಂಪೂರ್ಣ ಬಹುಮತ ಬಂದಲ್ಲಿ ರೈತರ ಸಾಲ ಮನ್ನಾ ಮಾಡುವ ಭರವಸೆ ನೀಡಿರಬಹುದು. ಆದರೆ ಈಗ ಮೈತ್ರಿ ಸರಕಾರದ ಸಚಿವರ ಆಯ್ಕೆಯೇ ಆಗದಿರುದರಿಂದ ಬಿಜೆಪಿಯ ಬಂದ್ ಹೇಳಿಕೆ ಜನರಿಗೆ ಗೊಂದಲ ಉಂಟು ಮಾಡುವ ಉದ್ದೇಶದಿಂದ ಕೂಡಿದೆ.
ಬಂದ್ ಕರೆಯಿಂದ ಸರಕಾರದ ಬೊಕ್ಕಸಕ್ಕೆ ಆಗುವ ನಷ್ಟದ ಹೊರೆಯನ್ನು ಬಿಜೆಪಿ ಪಾವತಿಸುವಂತೆ ಸರಕಾರ ಕ್ರಮ ಕೈಕೊಳ್ಳಬೇಕಾಗಿದೆ. ಬಿಜೆಪಿ ಅಧಿಕಾರ ದಲ್ಲಿದ್ದಾಗ ರೈತರ ಸಾಲ ಮನ್ನಾ ಬಗ್ಗೆ ಬೇಡಿಕೆಯನ್ನು ನಿರಾಕರಿಸಿದ್ದ ಯಡಿಯೂ ರಪ್ಪರೈತರಿಗೆ ದ್ರೋಹ ಬಗೆದಿರರುವುದು ರೈತರು ಮರೆತಿಲ್ಲ.
ಸಿದ್ದರಾಮಯ್ಯ ಕೇಂದ್ರದೊಡನೆ ರೈತರ ಸಾಲ ಮನ್ನಾ ಮಾಡುವ ಬಗ್ಗೆ ಬೇಡಿಕೆ ಇಟ್ಟಾಗ ಬಿಜೆಪಿ ಯಾವದೇ ರೀತಿಯ ಸಹಕಾರ ನೀಡಿಲ್ಲ. ರೈತರ ಬಗ್ಗೆ ಯಾವುದೇ ಕಾಳಜಿ ಹೊಂದಿರದ ಬಿಜೆಪಿಯ ಕರ್ನಾಟಕ ಬಂದ್ ಕರೆ ರಾಜಕೀಯ ಪ್ರೇರಿತ ಹಾಗೂ ಜನವಿರೋಧಿ ನಿಲುವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಭಾಸ್ಕರ ರಾವ್ ಕಿದಿಯೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







