ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯನ್ನು ಭೇಟಿಯಾದ ಮುಖ್ಯಮಂತ್ರಿ ಕುಮಾರಸ್ವಾಮಿ

ಬೆಂಗಳೂರು, ಮೇ 27: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ರವಿವಾರ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಅವರನ್ನು ಅರಮನೆ ರಸ್ತೆಯಲ್ಲಿರುವ ಅವರ ಶಾಂತಿನಿವಾಸದಲ್ಲಿ ಭೇಟಿ ಮಾಡಿ ಸಮಾಲೋಚನೆ ನಡೆಸಿದರು.
ರವಿವಾರ ಮಧ್ಯಾಹ್ನದ ಭೋಜನವನ್ನು ಮುಖ್ಯ ನ್ಯಾಯಮೂರ್ತಿ ಜತೆಯಲ್ಲಿ ಮಾಡಿ ಸುಮಾರು ಎರಡು ಗಂಟೆ ಕಾಲ ಶಾಂತಿನಿವಾಸದಲ್ಲೇ ಇದ್ದರು. ಇಬ್ಬರೂ ಏನು ಚರ್ಚಿಸಿದರು ಎಂಬುದು ಸದ್ಯಕ್ಕೆ ತಿಳಿದು ಬಂದಿಲ್ಲ.
ಆದಾಗ್ಯೂ, ಇದೊಂದು ಶಿಷ್ಟಾಚಾರದ ಭೇಟಿಯಾಗಿತ್ತು. ಈ ವೇಳೆ ಕುಮಾರಸ್ವಾಮಿ ಅವರು ಹೈಕೋರ್ಟ್‌ನಲ್ಲಿ ಖಾಲಿ ಇರುವ ನ್ಯಾಯಮೂರ್ತಿಗಳ ಸ್ಥಾನ ಭರ್ತಿಗೆ ಶೀಘ್ರ ಗಮನ ಹರಿಸುವಂತೆ ದಿನೇಶ್ ಮಹೇಶ್ವರಿ ಅವರಿಗೆ ಮನವಿ ಮಾಡಿದರು ಎಂದು ಮೂಲಗಳು ತಿಳಿಸಿವೆ.
ಹೈಕೋರ್ಟ್‌ನಲ್ಲಿ ನ್ಯಾಯಮೂರ್ತಿಗಳ ಮಂಜೂರು ಸಂಖ್ಯೆ ಒಟ್ಟು 62. ಸದ್ಯ 30 ನ್ಯಾಯಮೂರ್ತಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರಲ್ಲಿ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಇದೇ 31ಕ್ಕೆ ನಿವೃತ್ತಿ ಆಗಲಿದ್ದಾರೆ. ಮುಂದಿನ ತಿಂಗಳ (ಜೂನ್) 15ಕ್ಕೆ ನ್ಯಾಯಮೂರ್ತಿ ಬಿ.ಶ್ರೀನಿವಾಸೇಗೌಡ ನಿವೃತ್ತಿ ಆಗಲಿದ್ದು ಇದೇ ವರ್ಷದ ಸೆಪ್ಟೆಂಬರ್ 30ಕ್ಕೆ ನ್ಯಾಯಮೂರ್ತಿ ಆರ್.ಬಿ.ಬೂದಿಹಾಳ್ ನಿವೃತ್ತಿ ಆಗಲಿದ್ದಾರೆ.





