‘ಲಿಂಗಾಯತರು ರಾಷ್ಟ್ರದ್ರೋಹಿಗಳು’ ಎಂದು ಬಿಂಬಿಸುವುದು ನಿಲ್ಲಿಸಿ: ನಿವೃತ್ತ ಐಎಎಸ್ ಅಧಿಕಾರಿ ಜಾಮದಾರ್

ಬೆಂಗಳೂರು, ಮೇ 27: ಲಿಂಗಾಯತರನ್ನು ಹಿಂದೂ ವಿರೋಧಿಗಳು, ರಾಷ್ಟ್ರದ್ರೋಹಿಗಳು ಎಂದು ಬಿಂಬಿಸುವುದನ್ನು ನಿಲ್ಲಿಸಿ. ನಮಗೆ ಯಾವುದೇ ಧರ್ಮ ಒಡೆಯುವ ಉದ್ದೇಶವಿಲ್ಲ ಎಂದು ಜಾಗತಿಕ ಲಿಂಗಾಯತ ಮಹಾಸಭಾ ಪ್ರಧಾನ ಕಾರ್ಯದರ್ಶಿ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಎಸ್.ಎಂ.ಜಾಮದಾರ್ ಸ್ಪಷ್ಟಪಡಿಸಿದ್ದಾರೆ.
ರವಿವಾರ ನಗರದ ಬಸವ ಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ‘ಹಿಂದೂಧರ್ಮ’ ಒಡೆಯಲಾಗಿದೆ ಎಂದು ಪದೇ ಪದೆ ಆರೋಪಿಸಿದ್ದಾರೆ. ಆದರೆ, ನಾವು ಎಲ್ಲಿ ಧರ್ಮ ಒಡೆದಿದ್ದೇವೆ ಎಂಬುದನ್ನು ಅವರು ಸ್ಪಷ್ಟಪಡಿಸಿಲ್ಲ ಎಂದು ಹೇಳಿದರು.
ಹಿಂದೂ ಧರ್ಮ ಒಡೆದಿದ್ದೇವೆ ಎಂದು ಚುನಾವಣೆ ಗೆಲ್ಲುವ ತಂತ್ರವಾಗಿ ಬಳಸಿಕೊಂಡಿದ್ದಾರೆ. ನಿಮ್ಮಲ್ಲಿ ಎಷ್ಟು ರಾಷ್ಟ್ರ ಭಕ್ತಿ ಇದೆಯೋ ಅಷ್ಟೇ ನಮ್ಮಲ್ಲಿದೆ. ಹೀಗಾಗಿ, ಲಿಂಗಾಯತರನ್ನು ಹಿಂದೂ ವಿರೋಧಿಗಳು ಎಂದು ಬಿಂಬಿಸುವ ಯತ್ನ ಸರಿಯಲ್ಲ. ಆದುದರಿಂದಾಗಿ ಅನವಶ್ಯಕವಾಗಿ ಲಿಂಗಾಯತರಿಗೆ ರಾಷ್ಟ್ರದ್ರೋಹಿ ಪಟ್ಟ ಕಟ್ಟಲು ಮುಂದಾಗಬೇಡಿ ಎಂದು ಅವರು ಎಚ್ಚರಿಸಿದರು.
850 ವರ್ಷಗಳ ಹಿಂದೆ ಆರಂಭವಾದ ಲಿಂಗಾಯತ ಧರ್ಮ ಹಿಂದೂ ಧರ್ಮದ ಭಾಗವೇ ಆಗಿಲ್ಲ ಅಂದ ಮೇಲೆ ಧರ್ಮ ಒಡೆಯೋದೆಲ್ಲಿ ಬಂತು? ಎಂದು ವಾಗ್ದಾಳಿ ನಡೆಸಿದ ಅವರು, ನಾವು ವೀರಶೈವ ಹಾಗೂ ಲಿಂಗಾಯತರನ್ನು ಒಡೆದಿಲ್ಲ. ವೀರಶೈವರು ಬಸವಣ್ಣನನ್ನು ಧರ್ಮಗುರು ಎಂದು ಒಪ್ಪಿಕೊಂಡು ನಮ್ಮೊಂದಿಗೆ ಬಂದರೆ ನಾವು ಬೇಡ ಎನ್ನುವುದಿಲ್ಲ. ಆದರೆ, ಕೆಲವು ವೀರಶೈವರು ಹಾಗೂ ಪಂಚಪೀಠಾಧ್ಯಕ್ಷರು ಜನರಲ್ಲಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.
ಲಿಂಗಾಯತ ಮಹಾಸಭಾದ ಹಾಗೂ ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟದಲ್ಲಿ ಕಾಂಗ್ರೆಸ್‌ನವರು ಹೆಚ್ಚಿನ ಸಂಖ್ಯೆಯಲ್ಲಿದ್ದರು ಎಂಬ ಕಾರಣಕ್ಕೆ ನಾವು ಕಾಂಗ್ರೆಸ್ ಪಕ್ಷಕ್ಕೆ ಸೇರಿದವರಲ್ಲ. ನಾವು ಯಾವುದೇ ಒಂದು ರಾಜಕೀಯ ಪಕ್ಷಕ್ಕೆ ಸೀಮಿತವಾಗಿಲ್ಲ. ಹೀಗಾಗಿ, ಲಿಂಗಾಯತರು ಯಾರೂ ಈ ಬಗ್ಗೆ ಯಾವುದೇ ಅಪಪ್ರಚಾರಕ್ಕೆ ಒಳಗಾಗಬಾರದು ಎಂದು ತಿಳಿಸಿದರು.
ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಚಟುವಟಿಕೆ ನಿಲ್ಲಿಸಿತ್ತು. ಈಗ ಮತ್ತೆ ಮಹಾಸಭಾ ಚಟುವಟಿಕೆ ಆರಂಭಿಸಲು ಮುಂದಾಗಿದ್ದು, ಎಲ್ಲ ಜಿಲ್ಲಾ ಮಟ್ಟದ ಪದಾಧಿಕಾರಿಗಳೊಂದಿಗೆ ಸಭೆ ಮಾಡಲಾಗಿದೆ ಹಾಗೂ ಮಹಾಸಭಾದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಇದು ಯಾವುದೇ ರಾಜಕೀಯ ದೃಷ್ಟಿಕೋಟವನ್ನಿಟ್ಟುಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.
ಇತ್ತೀಚಿಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ 4 ಮಂದಿ ಲಿಂಗಾಯತ ನಾಯಕರು ಸೋತಿದ್ದು, ಪ್ರತ್ಯೇಕ ಧರ್ಮದ ಹೋರಾಟದಲ್ಲಿ ಭಾಗವಹಿಸಿದ್ದಕ್ಕೆ ಎಂಬುದನ್ನು ನಾವು ಒಪ್ಪುವುದಿಲ್ಲ. ಸ್ಥಳೀಯ ಕಾರಣಗಳಿಂದ ಸೋತಿದ್ದಾರೆ. ಲಿಂಗಾಯತ ಪ್ರತ್ಯೇಕ ಧರ್ಮದ ಬಗ್ಗೆ ಕೇಂದ್ರ ಸರಕಾರ ತಿರಸ್ಕಾರ ಮಾಡಿದೆ ಎಂಬ ಮಾಹಿತಿ ನಮಗೆ ಇಲ್ಲ. ಒಂದು ವೇಳೆ ಅಗತ್ಯ ಬಿದ್ದರೆ ಮಾತ್ರ ಕೇಂದ್ರ ಸರಕಾರವನ್ನು ಸಂಪರ್ಕ ಮಾಡುತ್ತೇವೆ ಎಂದು ಜಾಮದಾರ್ ಹೇಳಿದರು.







