ರಾಜಕೀಯ ಪಕ್ಷಗಳು ಆರ್‌ಟಿಐ ಕಾಯ್ದೆಯ ವ್ಯಾಪ್ತಿಗೆ ಬರುವುದಿಲ್ಲ: ಚು.ಆಯೋಗ

ಹೊಸದಿಲ್ಲಿ,ಮೇ 27: ರಾಜಕೀಯ ಪಕ್ಷಗಳು ಮಾಹಿತಿ ಹಕ್ಕು(ಆರ್‌ಟಿಐ) ಕಾಯ್ದೆಯ ವ್ಯಾಪ್ತಿಯಿಂದ ಹೊರಗಿವೆ ಎಂದು ಚುನಾವಣಾ ಆಯೋಗವು ಆದೇಶವೊಂದರಲ್ಲಿ ಹೇಳಿದ್ದು,ಇದು ಆರು ರಾಷ್ಟ್ರೀಯ ಪಕ್ಷಗಳನ್ನು ಕಾಯ್ದೆಯ ವ್ಯಾಪ್ತಿಗೆ ತರುವ ಕೇಂದ್ರ ಮಾಹಿತಿ ಆಯೋಗ(ಸಿಐಸಿ)ದ ನಿರ್ದೇಶಕ್ಕೆ ವಿರುದ್ಧವಾಗಿದೆ.
2013,ಜೂನ್‌ನಲ್ಲಿ ಆರ್‌ಟಿಐ ವ್ಯಾಪ್ತಿಗೊಳಪಡಿಸಲಾಗಿರುವ ಆರು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ,ಕಾಂಗ್ರೆಸ್,ಬಿಎಸ್‌ಪಿ,ಎನ್‌ಸಿಪಿ,ಸಿಪಿಎಂ ಮತ್ತು ಸಿಪಿಐ ಪಡೆದುಕೊಂಡಿರುವ ದೇಣಿಗೆಗಳು ಹಾಗೂ ಸಮಾಜವಾದಿ ಪಕ್ಷವು ನೂತನವಾಗಿ ಹೊರಡಿಸಿರುವ ಚುನಾವಣಾ ಬಾಂಡ್‌ಗಳ ಮೂಲಕ ಸಂಗ್ರಹಿಸಿರುವ ವಂತಿಗೆಗಳ ವಿವರಗಳನ್ನು ಕೋರಿ ಪುಣೆಯ ವಿಹಾರ ಧ್ರುವೆ ಅವರು ಸಲ್ಲಿಸಿದ್ದ ಮೇಲ್ಮನವಿಯ ಇತ್ಯರ್ಥದ ವೇಳೆ ಚುನಾವಣಾ ಆಯೋಗವು ಹೊರಡಿಸಿರುವ ಈ ಆದೇಶವು ವಿವಾದವನ್ನು ಸೃಷ್ಟಿಸುವ ಸಾಧ್ಯತೆಯಿದೆ.
ಆರು ರಾಜಕೀಯ ಪಕ್ಷಗಳನ್ನು ಆರ್‌ಟಿಐ ವ್ಯಾಪ್ತಿಗೊಳಪಡಿಸಿರುವ ಸಿಐಸಿ ಆದೇಶವನ್ನು ಉನ್ನತ ನ್ಯಾಯಾಲಯಗಳಲ್ಲಿ ಪ್ರಶ್ನಿಸಲಾಗಿಲ್ಲ, ಆದರೆ ತಮ್ಮನ್ನು ಗುರಿಯಾಗಿಸಿಕೊಂಡಿರುವ ಆರ್‌ಟಿಐ ಅರ್ಜಿಗಳನ್ನು ಅಂಗೀಕರಿಸಲು ಈ ಪಕ್ಷಗಳು ನಿರಾಕರಿಸಿವೆ. ಪಕ್ಷಗಳು ಸಿಐಸಿ ಆದೇಶವನ್ನು ಪಾಲಿಸದಿರುವುದನ್ನು ಹಲವಾರು ಸಾಮಾಜಿಕ ಕಾರ್ಯಕರ್ತರು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದು,ಈ ವಿಷಯ ವಿಚಾರಣೆಗೆ ಬಾಕಿಯಿದೆ.
ಆರ್‌ಟಿಐ ಕಾಯ್ದೆಗೆ ಸಂಬಂಧಿಸಿದಂತೆ ಕೇಂದ್ರ ಮಾಹಿತಿ ಆಯೋಗವು ಯಾವುದೇ ಸಂಸ್ಥೆಯು ಕಾಯ್ದೆಯ ವ್ಯಾಪ್ತಿಯಲ್ಲಿ ಬರುತ್ತದೆಯೇ ಎನ್ನುವುದನ್ನು ಘೋಷಿಸಬಹುದಾದ ಏಕೈಕ ಮೇಲ್ಮನವಿ ಪ್ರಾಧಿಕಾರವಾಗಿದೆ.
ಆರು ರಾಷ್ಟ್ರೀಯ ಪಕ್ಷಗಳನ್ನು ಆರ್‌ಟಿಐ ವ್ಯಾಪ್ತಿಗೊಳಪಡಿಸಿ ಸಿಐಸಿಯು ಘೋಷಿಸಿರುವಾಗ ಮತ್ತು ಸರ್ವೋಚ್ಚ ನ್ಯಾಯಾಲಯ ಅಥವಾ ಉಚ್ಚ ನ್ಯಾಯಾಲಯಗಳು ಅದನ್ನು ರದ್ದುಪಡಿಸಿರದಿದ್ದರೆ ಚುನಾವಣಾ ಆಯೋಗವು ಅದಕ್ಕೆ ವಿರುದ್ಧವಾದ ನಿಲುವನ್ನು ತಳೆಯುವಂತಿಲ್ಲ. ಚುನಾವಣಾ ಆಯೋಗದ ಆದೇಶದಲ್ಲಿ ಯಾವುದೇ ತಿರುಳಿಲ್ಲ ಎಂದು ಮಾಜಿ ಮುಖ್ಯ ಮಾಹಿತಿ ಆಯುಕ್ತ ಎ.ಎನ್.ತಿವಾರಿ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.
ಚುನಾವಣಾ ಆಯೋಗದ ಸಾರ್ವಜನಿಕ ಮಾಹಿತಿ ಅಧಿಕಾರಿ ಈ ಆದೇಶವನ್ನು ಹೊರಡಿಸುವಾಗ ತನ್ನ ಅಧಿಕಾರ ಮಿತಿಯನ್ನು ಅತಿಕ್ರಮಿಸಿದ್ದಾರೆ ಎಂದು ಖ್ಯಾತ ಮಾಹಿತಿ ಹಕ್ಕು ಕಾರ್ಯಕರ್ತ ವೆಂಕಟೇಶ್ ನಾಯಕ್ ಅವರು ಹೇಳಿದರು.
ಆರು ರಾಷ್ಟ್ರಿಯ ಪಕ್ಷಗಳನ್ನು ಆರ್‌ಟಿಐ ವ್ಯಾಪ್ತಿಗೊಳಪಡಿಸಿರುವ ಸಿಐಸಿಯ ಆದೇಶಕ್ಕೆ ಪಕ್ಷಗಳು ವಿಧೇಯವಾಗಿಲ್ಲವಾದರೂ ಅದು ಅಸ್ತಿತ್ವದಲ್ಲಿದೆ. ಅದಕ್ಕೆ ಯಾವುದೇ ನ್ಯಾಯಾಲಯವು ತಡೆಯಾಜ್ಞೆಯನ್ನು ನೀಡಿಲ್ಲ ಅಥವಾ ರದ್ದುಗೊಳಿಸಿಲ್ಲ. ಹೀಗಾಗಿ ರಾಷ್ಟ್ರೀಯ ಪಕ್ಷಗಳು ಆರ್‌ಟಿಐ ವ್ಯಾಪ್ತಿಯಲ್ಲಿವೆ ಎಂದು ಅವರು ವಿವರಿಸಿದರು.
ಆರ್‌ಟಿಐ ವ್ಯಾಪ್ತಿಯಲ್ಲಿರುವ ಎಲ್ಲ ಪಕ್ಷಗಳ ಕುರಿತು ಮಾಹಿತಿಗಳು ಚುನಾವಣಾ ಆಯೋಗದ ಬಳಿಯಲ್ಲಿವೆ ಮತ್ತು ಅದು ಸಿಐಸಿಗೆ ವಿರುದ್ಧ ನಿಲುವು ತಳೆಯುವ ಬದಲು ಈ ಮಾಹಿತಿಗಳನ್ನು ಬಹಿರಂಗಗೊಳಿಸಲು ಬದ್ಧವಾಗಿದೆ ಎಂದರು.







