ಸಾಲಮನ್ನಾಕ್ಕೆ ಬಿಎಸ್‌ವೈ ಮೊದಲು ಕೇಂದ್ರ ಸರಕಾರವನ್ನು ಒತ್ತಾಯಿಸಲಿ: ಮಾಜಿ ಸಚಿವ ವಿನಯ್ ಕುಲಕರ್ಣಿ

ಧಾರವಾಡ, ಮೇ 27: ಕೇಂದ್ರ ಸರಕಾರ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಹೆಸರಿನಲ್ಲಿ ವ್ಯಾಪಾರ ಮಾಡುತ್ತಿರುವುದನ್ನು ಬಿಟ್ಟರೆ ರೈತರಿಗಾಗಿ ಏನೂ ಮಾಡುತ್ತಿಲ್ಲ. ಯಡಿಯೂರಪ್ಪ ರೈತರ ಸಾಲಮನ್ನಾ ಕೋರಿ ಕೇಂದ್ರ ಸರಕಾರಕ್ಕೆ ಒತ್ತಾಯಿಸಬೇಕು ಎಂದು ಮಾಜಿ ಸಚಿವ ವಿನಯ್ ಕುಲಕರ್ಣಿ ಸಲಹೆ ಮಾಡಿದ್ದಾರೆ.
ರವಿವಾರ ನಗರದಲ್ಲಿ ಏರ್ಪಡಿಸಿದ್ದ ಕೃತಜ್ಞತಾ ಸಮಾರಂಭದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪಅವರನ್ನು ಬಿಜೆಪಿ ಮುಖ್ಯಮಂತ್ರಿ ಮಾಡಿದ್ದೇ ಒಂದು ನಾಟಕ. ಲೋಕಸಭಾ ಚುನಾವಣೆ ದೃಷ್ಟಿಯಿಂದ ಮುಖ್ಯಮಂತ್ರಿ ಮಾಡಿದರು ಎಂದರು ಟೀಕಿಸಿದರು.
ರಾಜ್ಯದಲ್ಲಿ ಲಿಂಗಾಯತ ಸಮುದಾಯದ ಮುಖಂಡ ಮುಖ್ಯಮಂತ್ರಿಯಾದರೂ ಮುಂದುವರಿಯಲು ಆಗಲಿಲ್ಲ. ಅದನ್ನೇ ಮುಂದಿಟ್ಟುಕೊಂಡು ಬಿಜೆಪಿ ಅನುಕಂಪ ಗಿಟ್ಟಿಸುವ ತಂತ್ರ ಮಾಡಿದೆ ಅಷ್ಟೇ ಎಂದು ಲೇವಡಿ ಮಾಡಿದ ಅವರು, ನಾನು ಚುನಾವಣೆಯಲ್ಲಿ ಸೋತರು ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿನ ಹೋರಾಟ ನಿಲ್ಲಿಸುವುದಿಲ್ಲ ಎಂದರು.
ನಾನು ಸೋತಿರಬಹುದು, ಆದರೆ ಯಾವುದೇ ಹೋರಾಟವನ್ನು ಬಿಟ್ಟು ಮನೆಯಲ್ಲಿ ಕುಳಿತುಕೊಳ್ಳುವುದಿಲ್ಲ. ನನ್ನಿಂದ ಏನಾದರೂ ತಪ್ಪಾಗಿದ್ದರೆ ಕ್ಷಮಿಸಿ ಬಿಡಿ. ನಾನು ಏನು ತಪ್ಪುಮಾಡಿದೆ ಎಂಬುವುದನ್ನೂ ಹಿರಿಯರು, ಕಾರ್ಯಕರ್ತರು ಎಚ್ಚರಿಸಲಿಲ್ಲ. ನಾನು ಸೋತಿದ್ದರೂ ಜನಸೇವೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಅವರು ನುಡಿದರು.







