ಬಿಜೆಪಿ ದಾವಣಗೆರೆ ಉತ್ತರ ವಿಭಾಗದ ವತಿಯಿಂದ ಅಭಿನಂದನಾ ಸಮಾರಂಭ

ದಾವಣಗೆರೆ,ಮೇ.27: ಜನರು ನನ್ನ ಮೇಲೆ ನಂಬಿಕೆಯಿಂದ ಈ ಚುನಾವಣೆಯಲ್ಲಿ ಗೆಲ್ಲಿಸಿದ್ದಾರೆ. ಇದರಿಂದಾಗಿ ಹೊಣೆಗಾರಿಕೆ ಹೆಚ್ಚಾಗಿದೆ. ಮುಂದೆ ಲೋಕಸಭೆ ಹಾಗೂ ಪಾಲಿಕೆ ಚುನಾವಣೆಯೂ ಬರಲಿದ್ದು, ಎಲ್ಲರೂ ಶ್ರಮಿಸಿದರೆ ಗೆಲುವು ಖಂಡಿತ ಎಂದು ದಾವಣಗೆರೆ ಉತ್ತರ ಶಾಸಕ, ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಹೇಳಿದರು.
ಭಾನುವಾರ ನಗರದ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನದಲ್ಲಿ ಬಿಜೆಪಿ ದಾವಣಗೆರೆ ಉತ್ತರ ವಿಧಾನಸಭಾ ವಿಭಾಗದ ವತಿಯಿಂದ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನಗರದಲ್ಲಿ ಕುಡಿಯುವ ನೀರು, ಸ್ವಚ್ಛತೆ, ಚರಂಡಿ, ಒಳಚರಂಡಿ ಹೀಗೆ ಅನೇಕ ಜ್ವಲಂತ ಸಮಸ್ಯೆಗಳಿವೆ. ಎಲ್ಲರ ಸಲಹೆ-ಸಹಕಾರ ಪಡೆದು ಸಮಸ್ಯೆ ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಕೊನೆ ಉಸಿರಿರುವರೆಗೂ ಬಿಜೆಪಿ ಪಕ್ಷದ ಕೆಲಸ ಮಾಡುತ್ತೇನೆ ಎಂದರು.
ದಾವಣಗೆರೆ ಉತ್ತರ ಕ್ಷೇತ್ರದಲ್ಲಿ ಪ್ರಬಲ ಕಾಂಗ್ರೆಸ್ ಅಭ್ಯರ್ಥಿ ಎದುರು ಗೆಲುವು ಕಷ್ಟವಾಗಿತ್ತು. ವಿರೋಧಿಗಳ ಹಣದ ಹೊಳೆ, ಗೂಂಡಾ ಹಾವಳಿ ಮುಂದೆ ಗೆಲುವಿಗಾಗಿ ಸೆಣಸಾಡಬೇಕಾದ ಪರಿಸ್ಥಿತಿ ಇತ್ತು. ಇದೆಲ್ಲದವರ ನಡುವೆಯೂ ಕಾರ್ಯಕರ್ತರು ಹಾಗೂ ಬೆಂಬಲಿಗರ ಸಹಕಾರದಿಂದ ಗೆಲುವು ಸಾಧ್ಯವಾಗಿದ್ದು, ಅವರೆಲ್ಲರಿಗೂ ಕೃತಜ್ಞತೆ ಸಲ್ಲಿಸುವೆ ಎಂದು ಹೇಳಿದರು.
ಸಂಸದ ಜಿ.ಎಂ. ಸಿದ್ದೇಶ್ವರ್ ಮಾತನಾಡಿ, ಕಳೆದ ಚುನಾವಣೆಯಲ್ಲಿ 57 ಸಾವಿರ ಮತಗಳ ಹಿನ್ನಡೆ ಅನುಭವಿಸಿದ್ದ ದಾವಣಗೆರೆ ಉತ್ತರ ಕ್ಷೇತ್ರದಲ್ಲಿ ಬಿಜೆಪಿಯನ್ನು ಈ ಬಾರಿ 4-5 ಸಾವಿರ ಮತಗಳ ಮುನ್ನಡೆಯೊಂದಿಗೆ ಗೆಲ್ಲಿಸಿದ ಕೀರ್ತಿ ಕಾರ್ಯಕರ್ತರಿಗೆ ಸಲ್ಲಬೇಕು ಎಂದ ಅವರು, ಕಳೆದ ಬಾರಿ 40 ಸ್ಥಾನ ಪಡೆದಿದ್ದ ಬಿಜೆಪಿ ಈ ಬಾರಿ 104 ಸ್ಥಾನ ಪಡೆದಿದೆ. 122 ಸ್ಥಾನ ಗೆದ್ದಿದ್ದ ಕಾಂಗ್ರೆಸ್ 78ಕ್ಕೆ ಇಳಿದರೆ, 40 ಸ್ಥಾನ ಹೊಂದಿದ್ದ ಜೆಡಿಎಸ್ 37ಕ್ಕೆ ತೃಪ್ತಿಪಟ್ಟುಕೊಂಡಿದೆ. ಕಾಂಗ್ರೆಸ್ಸಿಗರು 37 ಸ್ಥಾನ ಗೆದ್ದಿರುವ ಜೆಡಿಎಸ್ ಪಕ್ಷಕ್ಕೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟು ಅಪವಿತ್ರ ಮೈತ್ರಿ ಮಾಡಿಕೊಂಡಿದ್ದಾರೆ. ಈ ಮೈತ್ರಿ ಸರ್ಕಾರ ಬಹಳ ದಿನ ಉಳಿಯುವುದಿಲ್ಲ ಎಂದರು.
ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್ ಮಾತನಾಡಿ, ಸ್ಮಶಾನವೊಂದನ್ನು ಬಿಟ್ಟು ಎಲ್ಲಿ ನೋಡಿದರೂ ಊರಿನ ಆಗರ್ಭ ಶ್ರೀಮಂತರ ಹೆಸರುಳ್ಳ ಬೋರ್ಡ್ ಕಾಣಿಸುತ್ತದೆ. ಸರ್ಕಾರದ ಯೋಜನೆ, ಕಾಮಗಾರಿಗಳಿಗೆ ಬದುಕಿರುವ ವ್ಯಕ್ತಿಯ ಹೆಸರಿಡಬಾರದೆಂದು ನ್ಯಾಯಾಲಯದ ಆದೇಶವಿದ್ದು, ಅದರಂತೆ ಮುಂದೆ ಅಂತದ್ದಕ್ಕೆಲ್ಲಾ ಕಡಿವಾಣ ಹಾಕಬೇಕು ಎಂದರು.
ದಾವಣಗೆರೆ ಉತ್ತರ ಬಿಜೆಪಿ ಅಧ್ಯಕ್ಷ ಮುಕುಂದಪ್ಪ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಾ.ಎ.ಹೆಚ್.ಶಿವಯೋಗಿಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್, ಜಿಲ್ಲಾ ಉಸ್ತುವಾರಿ ಎಲ್.ಬಸವರಾಜ, ಕ್ಷೇತ್ರ ಉಸ್ತುವಾರಿ ಎಸ್.ದತ್ತಾತ್ರಿ, ಮಾಯಕೊಂಡ ಶಾಸಕ ಪ್ರೊ.ಲಿಂಗಣ್ಣ, ಸ್ಲಂ ಮೋರ್ಚಾ ರಾಜ್ಯಾಧ್ಯಕ್ಷ ಜಯಪ್ರಕಾಶ ಅಂಬರಕರ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮಂಜುಳಾ ರಾಜು, ಉಪಾಧ್ಯಕ್ಷೆ ಗೀತಾ ಗಂಗಾನಾಯ್ಕ, ತಾಲೂಕು ಪಂಚಾಯತ್ ಅಧ್ಯಕ್ಷೆ ಮಮತಾ ಮಲ್ಲೇಶಪ್ಪ, ಪಾಲಿಕೆ ಸದಸ್ಯ ಡಿ.ಕೆ.ಕುಮಾರ, ಮುಖಂಡರಾದ ಹೆಚ್.ಎಸ್.ನಾಗರಾಜ, ಬಿ.ಎಸ್.ಜಗದೀಶ, ಧನಂಜಯ ಕಡ್ಲೇಬಾಳ್, ಕೆ.ಜಿ.ಕಲ್ಲಪ್ಪ, ಪಿ.ಎಸ್.ಜಯಣ್ಣ, ಆರ್.ಲಕ್ಷ್ಮಣ, ಮಂಜುನಾಥ, ಕೆ.ಎನ್.ಓಂಕಾರಪ್ಪ, ಕೆ.ಎಂ.ಸುರೇಶ, ವೀರೇಶ ಪೈಲ್ವಾನ್, ಟಿ.ಎನ್.ಚಂದ್ರಶೇಖರ, ಕಲ್ಪನಹಳ್ಳಿ ಉಜ್ಜಪ್ಪ, ದೊಗ್ಗಳ್ಳಿ ರೇವಣಸಿದ್ದಪ್ಪ, ಸಿದ್ಧಲಿಂಗಪ್ಪ, ಎಸ್.ಎಂ.ವೀರೇಶ ಹನಗವಾಡಿ, ಕೃಷ್ಠ ಇದ್ದರು.







