ವಿಜಯಾ ದಬ್ಬೆ ಶೋಷಿತ, ದಲಿತರ ಪರವಾಗಿಯೂ ಹೋರಾಟ ಮಾಡುತ್ತಿದ್ದರು: ಡಾ.ಚಂದ್ರಮತಿ ಸೊಂದ

ಮೈಸೂರು,ಮೇ.27: ಮಹಿಳಾ ಸಂಘಟನೆಗೆ ಭದ್ರ ಬುನಾದಿ ಹಾಕಿದ ವಿಜಯ ದಬ್ಬೆಯವರು ಮಹಿಳಾ ಪರವಾಗಿ ಮಾತ್ರವಲ್ಲದೆ ಶೋಷಿತ, ದಲಿತರ ಪರವಾದ ಹೋರಾಟಗಳಲ್ಲಿ ಪಾಲ್ಗೊಂಡು ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದವರು ಎಂದು ಮಹಿಳಾ ಚಿಂತಕಿ ಡಾ.ಚಂದ್ರಮತಿ ಸೊಂದ ತಿಳಿಸಿದರು.
ಮಾನಸಗಂಗೋತ್ರಿಯ ಕುವೆಂಪು ಅಧ್ಯಯನ ಸಂಸ್ಥೆಯ ಅವರಣದಲ್ಲಿ ಬೆಂಗಳೂರಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗೂ ಮೈಸೂರಿನ ಕವಿ-ಕಾವ್ಯ-ವಿಚಾರ ವೇದಿಕೆ ಸಂಯುಕ್ತಾಶ್ರದಲ್ಲಿ ರವಿವಾರ ಹಮ್ಮಿಕೊಂಡಿದ್ದ 'ಚಕೋರ-101-ವಿಜಯ ದಬ್ಬೆ ಅವರ ಕವಿತೆಗಳ ಓದು' ಎಂಬ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿಜಯ ದಬ್ಬೆಯವರ ಚಿಂತನೆಗಳು ಅಂದಿನ ಕಾಲಘಟ್ಟದ ಯುವ ಬರಹಗಾರರಿಗೆ ಮಾದರಿಯಾಗಿತ್ತು. ದಬ್ಬೆಯವರ ಬರಹಗಳು ಮಹಿಳೆಯರ ಪರ ಮಾತ್ರವಲ್ಲದೆ ದಲಿತರು, ಶೋಷಿತರ ಪರವಾಗಿರುತ್ತಿತ್ತು. ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸುತ್ತಿದ್ದಾಗ, ವಿಶ್ವ ವಿದ್ಯಾನಿಲಯದ ನೀತಿ ನಿಲಯಮಗಳನ್ನು ಮೀರಿ ಅವರು ಹೋರಾಟಕ್ಕೆ ಜತೆಯಾಗುತ್ತಿದ್ದರು. ಅದಕ್ಕಾಗಿಯೇ ವಿಶ್ವವಿದ್ಯಾನಿಲಯವು ಅವರನ್ನು ಅಮಾನತು ಮಾಡಿತ್ತು. ಅದನ್ನು ಪ್ರಬಲವಾಗಿ ಎದುರಿಸಿ ಹೋರಾಟವನ್ನು ರೂಪುಗೊಳಿಸಿ ಸಮತಾ ವೇದಿಕೆಯನ್ನು ಕಟ್ಟಿ ಬೆಳೆಸಿದರು ಎಂದು ವಿಜಯಾ ದಬ್ಬೆಯವರ ನೆನಪುಗಳನ್ನು ಮೆಲುಕು ಹಾಕಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುವೆಂಪು ಕನ್ನಡ ಅಧ್ಯನ ಸಂಸ್ಥೆ ನಿರ್ದೇಶ ಡಾ.ನೀಲಗಿರಿ ಎಂ.ತಳವಾರ್ ಅವರು ಮಾತನಾಡಿ, ವಿಜಯ ದಬ್ಬೆ ಅವರ ಕವಿತೆಗಳಲ್ಲಿ ಬಂಡಾಯದ ಪ್ರತಿಭಟನೆಯನ್ನು ಕಾಣುತ್ತೇವೆ. ಅವರು ಯಾವುದೇ ಕಾರಣಕ್ಕೂ ಅನ್ಯಾಯದ ಸೋಲನ್ನು ಒಪ್ಪಿಕೊಳ್ಳದ ಮಹಾದಿಟ್ಟ ತನದ ಮಹಿಳೆಯಾಗಿದ್ದರು. ಅವರು ಜೀವನದುದ್ದಕ್ಕೂ ಸಾಮಾಜಿಕ ಅನ್ಯಾಯದ ವಿರುದ್ಧವಾಗಿಯೇ ಬದುಕಿದ್ದರು. ದೃಡತೆಯ ಸೈದ್ದಾಂತಿಕ ಹಿನ್ನೆಲೆಯಲ್ಲೇ ಅವರ ಬದುಕು ಬರಹವಾಗಿತ್ತು. ಇವತ್ತು ಎಲ್ಲ ಮಹಿಳಾ ಹೋರಾಟಗಾರರಿಗೆ, ಚಿಂತಕರಿಗೆ ದಬ್ಬೆ ಅವರು ಶಕ್ತಿಯಾಗಬೇಕಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಆರಂಭದಲ್ಲಿ ಡಾ.ಕುಶಾಲ ಬರಗೂರು, ಟಿ.ಸತೀಶ್ ಜವರೇಗೌಡ, ಡಾ.ಎನ್.ಯೋಗೇಶ್, ಎಂ.ಎಸ್.ಸಂಧ್ಯಾರಾಣಿ, ಎಚ್.ಎನ್.ರಾಮಕೃಷ್ಣ, ಪಿ.ಎನ್.ಹೇಮಲತಾ ಅವರು ತಲಾ ಒಂದೊಂದು ವಿಜಯ ದಬ್ಬೆ ಅವರ ಕರ್ಪ್ಯೂ, ಭಿನ್ನಮತ, ಪರಂಪರೆ, ಸಹನೆ, ರಾಣಿ ತಿಮ್ಮಿಯ ಸಿಂಹಾಸನ, ಇರುತ್ತವೆ ಎಂಬ ಕವಿತೆಗಳನ್ನು ಓದಿದರು.
ಡಾ.ಕುಪ್ನಳ್ಳಿ.ಎಂ.ಬೈರಪ್ಪ ಅವರು ಕವಿತೆಗೆ ಪ್ರತಿಕ್ರಿಯೆ ನೀಡಿದರು. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಕರಿಯಪ್ಪ, ನೀ.ಗೂ ರಮೇಶ್, ಡಾ.ಶಿಲ್ಪಶ್ರೀ ಹರವು ಇನ್ನಿತರರು ಹಾಜರಿದ್ದರು.







