ರೈತರ ಸಾಲಮನ್ನಾ ಬಗ್ಗೆ ಏಕಪಕ್ಷೀಯ ತೀರ್ಮಾನ ಸಾಧ್ಯವಿಲ್ಲ: ಶಾಸಕ ಎಚ್.ವಿಶ್ವನಾಥ್

ಮೈಸೂರು,ಮೇ.27: ಸಮ್ಮಿಶ್ರ ಸರಕಾರ ಇರುವುದರಿಂದ ಏಕಪಕ್ಷೀಯವಾಗಿ ರೈತರ ಸಾಲಮನ್ನಾದ ಬಗ್ಗೆ ತೀರ್ಮಾನ ಕೈಗೊಳ್ಳಲು ಸಾಧ್ಯವಿಲ್ಲ. ಹಾಗಾಗಿ ಎರಡೂ ಪಕ್ಷಗಳ ಮುಖಂಡರು ಚರ್ಚಿಸಿ ರೈತರ ಸಮಸ್ಯೆಯನ್ನು ಬಗೆಹರಿಸಲಿದ್ದಾರೆ ಎಂದು ಶಾಸಕ ಎಚ್.ವಿಶ್ವಾನಾಥ್ ವಿಶ್ವಾಸ ವ್ಯಕ್ತಪಡಿಸಿದರು.
ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠಕ್ಕೆ ರವಿವಾರ ಭೇಟಿ ನೀಡಿ ಸುತ್ತೂರು ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳ ಆಶೀರ್ವಾದ ಪಡೆದು ನಂತರ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. 'ರೈತರ ಸಾಲ ಮನ್ನಾ ಮಾಡುವಂತೆ ಬಿಜೆಪಿಯವರು ರಾಜ್ಯದ ರೈತರ ದಿಕ್ಕು ತಪ್ಪಿಸುತ್ತಿದ್ದಾರೆ. ಕುಮಾರಸ್ವಾಮಿ ರೈತರ ಸಾಲ ಮನ್ನಾ ಮಾಡುವುದಿಲ್ಲ ಎಂದು ಎಲ್ಲಿಯೂ ಹೇಳಿಲ್ಲ. ಸಮ್ಮಿಶ್ರ ಸರಕಾರ ಇರುವುದರಿಂದ ಸ್ವಲ್ಪ ವಿಳಂಬವಾಗಬಹುದು ಎಂದು ಹೇಳಿದ್ದಾರೆ. ಆದರೆ ಬಿಜೆಪಿ ಮುಖಂಡರು ಇದನ್ನೇ ದೊಡ್ಡದು ಮಾಡಿಕೊಂಡು ರಾಜ್ಯದ ರೈತರನ್ನು ದಿಕ್ಕು ತಪ್ಪಿಸುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಜೆಡಿಎಸ್‍ಗೆ 12 ಸಚಿವ ಸ್ಥಾನಗಳಿವೆ. ಎಲ್ಲರೂ ನಾನು ಮಂತ್ರಿ, ನಾನು ಮಂತ್ರಿ ಆಗಬೇಕು ಎಂದರೆ ಅದನ್ನು ನಿಭಾಯಿಸುವುದು ಕಷ್ಟ. ಮಂತ್ರಿ ಆಗಲು ಪಟ್ಟು ಹಿಡಿಯುವುದಕ್ಕಿಂತ ಸಮ್ಮಿಶ್ರ ಸರಕಾರ ಯಶಸ್ವಿಯಾಗುವುದನ್ನು ಬಯಸಬೇಕಿದೆ ಎಂದು ಹೇಳಿದರು.
ನಾನು ಮಂತ್ರಿಯಾಗುವ ಬಗ್ಗೆ ಚರ್ಚೆ ನಡೆದಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ. ಪಕ್ಷ ಯಾವ ಸ್ಥಾನ ಕೊಟ್ಟರೂ ನಿಭಾಯಿಸುತ್ತೇನೆ. ದಳ ಮತ್ತು ಕಾಂಗ್ರೆಸ್ ಮುಖಂಡರು ತೆಗೆದುಕೊಳ್ಳುವ ನಿರ್ಧಾರಕ್ಕೆ ನನ್ನ ಒಮ್ಮತವಿದೆ ಎಂದರು.
ಜಿಲ್ಲಾ ಜೆಡಿಎಸ್ ಅಧ್ಯಕ್ಷ ಎನ್.ನರಸಿಂಹಸ್ವಾಮಿ, ನಗರಾಧ್ಯಕ್ಷ ಕೆ.ಟಿ.ಚಲುವೇಗೌಡ, ಜೆಡಿಎಸ್ ಮುಖಂಡರಾದ ಸೋಮಸುಂದರ್, ಅಶೋಕಪುರಂ ರೇವಣ್ಣ ಸೇರಿದಂತೆ ಹಲವರು ಜೊತೆಯಲ್ಲಿದ್ದರು.







