ಹೈದರಾಬಾದ್: ತೃತೀಯ ಲಿಂಗಿಯ ಥಳಿಸಿ ಹತ್ಯೆ
ಮಕ್ಕಳ ಕಳ್ಳರೆಂಬ ಶಂಕೆ

ಹೈದರಾಬಾದ್, ಮೇ 27: ಹೈದರಾಬಾದ್‌ನ ಚಂದ್ರಯಂಗುಟ್ಟಾದಲ್ಲಿ ಶನಿವಾರ ರಾತ್ರಿ ತೃತೀಯ ಲಿಂಗಿಯೊಬ್ಬರನ್ನು ಗುಂಪೊಂದು ಥಳಿಸಿ ಹತ್ಯೆಗೈದಿದೆ. ಈ ಸಂದರ್ಭ ಅವರನ್ನು ಗುಂಪಿನಿಂದ ರಕ್ಷಿಸಲು ಪ್ರಯತ್ನಿಸಿದ ಇನ್ನೋರ್ವ ತೃತೀಯ ಲಿಂಗಿ ಹಾಗೂ ವ್ಯಕ್ತಿಗೆ ಗಂಭೀರ ಗಾಯಗಳಾಗಿವೆ.
ಭಿಕ್ಷೆ ಬೇಡುವ ಉದ್ದೇಶದಿಂದ ಇಬ್ಬರು ಲಿಂಗಾಂತರಿಗಳು ಹಾಗೂ ವ್ಯಕ್ತಿಯೋರ್ವ ಇತ್ತೀಚೆಗೆ ಮೆಹಬೂಬಾನಗರಕ್ಕೆ ಆಗಮಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಶನಿವಾರ ರಾತ್ರಿ 12.10ಕ್ಕೆ ಈ ಪ್ರದೇಶದಲ್ಲಿ ಮೂವರು ಸಂಚರಿಸುವುದನ್ನು ಕೆಲವರು ಗಮನಿಸಿದ್ದಾರೆ ಹಾಗೂ ಅವರು ಮಕ್ಕಳ ಅಪಹರಣ ಕಾರರು ಎಂದು ಸುದ್ದಿ ಹಬ್ಬಿಸಿದ್ದಾರೆ. ಇದರಿಂದ ಈ ಮೂವರು ಹಾಗೂ ಸ್ಥಳೀಯರ ನಡುವೆ ಮಾತಿನ ಚಕಮಕಿ, ಪರಸ್ಪರ ಹಲ್ಲೆ ನಡೆದಿದೆ. ಕೂಡಲೇ ಜಮಾಯಿಸಿದ ಸ್ಥಳೀಯರು ಮೂವರಿಗೂ ಥಳಿಸಿದ್ದಾರೆ. ಗಂಭೀರ ಗಾಯಗೊಂಡ ಓರ್ವ ತೃತೀಯ ಲಿಂಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾಹಿತಿ ತಿಳಿದ ಪೊಲೀಸರು ಕೂಡಲೇ ಘಟನ ಸ್ಥಳಕ್ಕೆ ಆಗಮಿಸಿ ಗುಂಪನ್ನು ಚದುರಿಸಲು ಪ್ರಯತ್ನಿಸಿದರು. ಇದರಿಂದ ಆಕ್ರೋಶಿತರಾದ ಸ್ಥಳೀಯರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದರು. ಘಟನೆಯಲ್ಲಿ ಓರ್ವ ಪೊಲೀಸ್ ಗಾಯಗೊಂಡರು. ಕೂಡಲೇ ದಕ್ಷಿಣ ವಲಯದ ಉಪ ಪೊಲೀಸ್ ಆಯುಕ್ತ ವಿ. ಸತ್ಯನಾರಾಯಣ ಹೆಚ್ಚುವರಿ ಪೊಲೀಸರೊಂದಿಗೆ ಸ್ಥಳಕ್ಕೆ ಆಗಮಿಸಿ ಗುಂಪನ್ನು ಚದುರಿಸಿದರು. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಮೃತಪಟ್ಟ ತೃತೀಯ ಲಿಂಗಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಶವಾಗಾರಕ್ಕೆ ಸಾಗಿಸಲಾಯಿತು. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.







