ಮೈಸೂರು: ವರದಕ್ಷಿಣೆ ಕಿರುಕುಳಕ್ಕೆ ಯುವತಿ ಬಲಿ

ಮೈಸೂರು,ಮೇ.27: ವರದಕ್ಷಿಣೆ ಕಿರುಕುಳದಿಂದಾಗಿ ಎನ್.ಆರ್.ಮೊಹಲ್ಲಾ ಮುಸ್ಲಿಂ ಬ್ಲಾಕ್ ಯುವತಿಯೊಬ್ಬಳು ಬಲಿಯಾಗಿದ್ದಾಳೆ ಎನ್ನಲಾದ ಘಟನೆ ನಡೆದಿದೆ.
ಮೃತ ಮಹಿಳೆ ಆಯಿಷ (19). ಬೆಂಗಳೂರಿನ ಈಕೆ ಕಳೆದ ಎಂಟು ತಿಂಗಳ ಹಿಂದಷ್ಟೇ ಎನ್.ಆರ್.ಮೊಹಲ್ಲಾದ ನಿವಾಸಿ ಸೈಯದ್ ರುಬಾನ್ ಎಂಬಾತನನ್ನು ಮದುವೆಯಾಗಿದ್ದಳು. ಮದುವೆಯ ಸಮಯದಲ್ಲಿ ಆಯಿಷಾಳ ಮನೆಯವರು ಸಾಕಷ್ಟು ಚಿನ್ನ, ಹಣ ನೀಡಿದ್ದರು ಎನ್ನಲಾಗಿದೆ.
ಆದರೂ ಸೈಯದ್ ರುಬಾನ್ ಮನೆಯವರು ಆಕೆಗೆ ವರದಕ್ಷಿಣೆ ತರುವಂತೆ ಪದೇ ಪದೇ ಒತ್ತಾಯ ಮಾಡುತ್ತಿದ್ದರು ಎನ್ನಲಾಗಿದ್ದು, ಇದಕ್ಕೆ ಪ್ರತಿರೋದ ಒಡ್ಡಿದ ಆಯಿಷಾ ಮೇಲೆ ಮೇ.23 ರಂದು ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿದ್ದಾರೆ. ಸುಟ್ಟ ಗಾಯಗಳಾಗಿದ್ದ ಆಯಿಷಳನ್ನು ನಗರದ ಕೆ.ಆರ್.ಆಸ್ಪತ್ರೆಗೆ ಚಿಕಿತ್ಸೆಗೆ ಸೇರಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತ ಪಟ್ಟಿದ್ದಾಳೆ ಎಂದು ಮೃತಳ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಸಂಬಂಧ ಪತಿ ಮತ್ತು ಆತನ ಸಹೋದರನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.





