‘ಮಟ್ಟಿ ಮುರಲೀಧರ ರಾವ್’- ‘ಪೆರ್ಲ ಕೃಷ್ಣ ಭಟ್’ ಪ್ರಶಸ್ತಿ ಪ್ರದಾನ

ಉಡುಪಿ, ಮೇ 27: ಪರ್ಯಾಯ ಪಲಿಮಾರು ಮಠದ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಬ್ಯಾಂಕ್ ಮಂಗಳೂರು ಮತ್ತು ಯಕ್ಷಗಾನ ಕಲಾರಂಗ ಉಡುಪಿ ಇದರ ಸಹಯೋಗದೊಂದಿಗೆ ಉಡುಪಿ ಕೃಷ್ಣ ಮಠದ ರಾಜಾಂಗಣದಲ್ಲಿ ರವಿವಾರ ನಡೆದ ತಾಳಮದ್ದಳೆ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಹಿರಿಯ ತಾಳಮದ್ದಳೆ ಅರ್ಥಧಾರಿಗಳಾದ ಚಂದ್ರಶೇಖರ ರಾವ್ ಬಿ. ಅವರಿಗೆ ‘ಮಟ್ಟಿ ಮುರಲೀಧರ ರಾವ್’ ಹಾಗೂ ಪ್ರೊ.ಎಂ.ಎ. ಹೆಗಡೆ ಅವರಿಗೆ ‘ಪೆರ್ಲ ಕೃಷ್ಣ ಭಟ್’ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಪ್ರಶಸ್ತಿ ಪ್ರದಾನ ಮಾಡಿದ ಪರ್ಯಾಯ ಪಲಿಮಾರು ಶ್ರೀವಿದ್ಯಾಧೀಶ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ಹಲವು ಮಾಧ್ಯಮಗಳ ಭರಾಟೆಯಲ್ಲೂ ಯಕ್ಷಗಾನ ತನ್ನ ಜನಪ್ರಿಯತೆಯನ್ನು ಕಾಯ್ದುಕೊಂಡಿದ್ದು, ಕಲಾವಿದರ ಭಾವ ಸ್ಪರ್ಶಿ ಅಭಿನಯದಿಂದ ಪಾತ್ರ ಪೂರ್ಣ ಚೈತನ್ಯ ಪಡೆಯುತ್ತಿದೆ. ಯಕ್ಷಗಾನ ಕಲಾಪ್ರಾಕಾರದಲ್ಲಿ ಮನೋರಂಜನೆ ಜೊತೆಗೆ ಮನೋವಿಕಾಸವೂ ತುಂಬಿ ಕೊಂಡಿದೆ. ತೆಂಕು ಮತ್ತು ಬಡಗುತಿಟ್ಟುಗಳು ಎರಡು ಕಣ್ಣುಗಳಿದ್ದಂತೆ ಎಂದು ಹೇಳಿದರು.
ಅದಮಾರು ಕಿರಿಯ ಯತಿ ಶ್ರೀಈಶಪ್ರಿಯ ತೀರ್ಥ ಸ್ವಾಮೀಜಿ ಅನುಗ್ರಹ ಸಂದೇಶ ನೀಡಿದರು. ಹಿರಿಯ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಶಿ ಅಭಿ ನಂದನಾ ಭಾಷಣ ಮಾಡಿದರು. ಹಿರಿಯ ಅರ್ಥಧಾರಿ ಕೆ.ಶ್ರೀಕರ ಭಟ್ ಸಪ್ತಾಹದ ಅವಲೋಕನ ಮಾಡಿದರು.
ಕರ್ಣಾಟಕ ಬ್ಯಾಂಕ್‌ನ ಮಹಾಪ್ರಬಂಧಕ ಬಿ.ನಾಗರಾಜ ರಾವ್, ಧರ್ಮಸ್ಥಳ ಶಾಂತಿವನ ಟ್ರಸ್ಟ್‌ನ ಕಾರ್ಯದರ್ಶಿ ಸೀತಾ ರಾಮ ತೋಳ್ಪಡಿತ್ತಾಯ ಮುಖ್ಯ ಅತಿಥಿಗಳಾಗಿದ್ದರು. ಯಕ್ಷಗಾನ ಕಲಾರಂಗದ ಉಪಾಧಕ್ಷರುಗಳಾದ ಎಸ್.ವಿ. ಭಟ್, ಎಂ.ಗಂಗಾಧರ್ ರಾವ್ ಉಪಸ್ಥಿತರಿದ್ದರು. ಅಧ್ಯಕ್ಷ ಕೆ.ಗಣೇಶ್ ರಾವ್ ಸ್ವಾಗತಿಸಿದರು. ನಾರಾಯಣ ಎಂ.ಹೆಗಡೆ ವಂದಿಸಿದರು. ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು.







