ಬೆಳ್ತಂಗಡಿ: ಬಿಜೆಪಿ ವತಿಯಿಂದ ಕಾರ್ಯಕರ್ತರಿಗೆ ಅಭಿನಂದನಾ ಕಾರ್ಯಕ್ರಮ

ಬೆಳ್ತಂಗಡಿ, ಮೇ 27: ಕಳೆದ ನಾಲ್ಕು ವರ್ಷದಲ್ಲಿ ಕೇಂದ್ರ ಸರಕಾರ ಜಿಲ್ಲೆಗೆ ಹದಿನೈದು ಸಾವಿರ ಕೋಟಿ ರೂ. ಅನುದಾನ ಮಂಜೂರು ಮಾಡಿದ್ದರೂ ಇಲ್ಲಿನ ಶಾಸಕರುಗಳು ಅಭಿವೃದ್ಧಿಯಲ್ಲಿ ರಾಜಕಾರಣ ಮಾಡಿದ್ದರಿಂದ ಸರಿಯಾಗಿ ಸದುಪಯೋಗ ಆಗಿಲ್ಲ. ಇದೀಗ ಜನತೆ ಜಿಲ್ಲೆಯಲ್ಲಿ ಏಳು ಶಾಸಕರನ್ನು ಆಯ್ಕೆ ಮಾಡುವ ಮೂಲಕ ಕಾಂಗ್ರೆಸ್ ಮುಕ್ತ ಜಿಲ್ಲೆಯನ್ನಾಗಿ ಮಾಡಿದ್ದಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.
ಅವರು ರವಿವಾರ ಗುರುವಾಯನಕೆರೆ ಕಿನ್ಯಮ್ಮ ಯಾನೆ ಗುಣವತಿ ಅಮ್ಮ ಸಭಾಭವನದಲ್ಲಿ ಬೆಳ್ತಂಗಡಿ ಬಿಜೆಪಿ ಮಂಡಲದ ವತಿಯಿಂದ ಕಾರ್ಯಕರ್ತರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕೇಂದ್ರ ಸರಕಾರದಿಂದ ಬಂದ ಅನುದಾನ ಸರಿಯಾಗಿ ವಿನಿಯೋಗ ಮಾಡಲು ನಮ್ಮ ಪಕ್ಷದ ಶಾಸಕರುಗಳು ಇರಲಿಲ್ಲ. ಈಗ ಜಿಲ್ಲೆಯಲ್ಲಿ 7 ಶಾಸಕರು ಆಯ್ಕೆಯಾಗಿದ್ದು ಕೇಂದ್ರ ಸರಕಾರದ ಅನುದಾನವನ್ನು ಸದ್ವಿನಿಯೋಗಿಸಿಕೊಂಡು ಜಿಲ್ಲೆಯನ್ನು ಅಭಿವೃದ್ಧಿ ಮಾಡಲಾಗುವುದು ಎಂದರು.
ಜಿಲ್ಲಾ ವಕ್ತಾರ ಹರಿಕೃಷ್ಣ ಬಂಟ್ವಾಳ ಮಾತನಾಡಿ, ರಾಜ್ಯದ ಕಾಂಗ್ರೆಸ್ ಹಾಗೂ ಜೆಡಿಎಸ್ ಆಡಳಿತ ಮುಳುಗುವ ದೋಣಿಯಂತಿದೆ. ಈಗಾಗಲೇ ಮಂತ್ರಿ ಪದವಿಗಾಗಿ ಮುಳುಗಲು ಶುರುವಾಗಿದೆ. 4 ತಿಂಗಳಲ್ಲಿ ಸಂಪೂರ್ಣ ಮುಳಗುತ್ತದೆ ಎಂದ ಅವರು, ಮುಂಬರುವ ಲೋಕಸಭೆ ಚುನಾವಣೆಗೆ ಕಾರ್ಯಕರ್ತರು ತಯಾರಾಗಬೇಕು. ದೇಶದ ಬಗ್ಯೆ ಚಿಂತನೆ, ಇತಿಹಾಸದ ಅರಿವು ಬೇಕು. ನಮಗೆ ಜಾತಿ, ಧರ್ಮಕ್ಕಿಂತ ದೇಶ ಮುಖ್ಯ ಎಂದರು.
ಶಾಸಕ ಹರೀಶ ಪೂಂಜ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿ, ನನ್ನೊಂದಿಗೆ ಇದ್ದ ಯುವಕರಿಗೆ ಏನು ಗೊತ್ತಿಲ್ಲ ಎಂದು ಲೇವಡಿ ಮಾಡುತ್ತಿದ್ದರಿಗೆ ಮತದಾರರು ಸರಿಯಾದ ಉತ್ತರ ನೀಡಿದ್ದಾರೆ. ಯುವ ಜನತೆಯ ಹಿಂದಿರುವ ಶಕ್ತಿಯೇ ನಮ್ಮ ಹಿರಿಯ ಪ್ರಮುಖರು. ಅವರ ಮಾರ್ಗದರ್ಶನದಿಂದಲೇ ವಿಜಯ ಪತಾಕೆಯನ್ನು ಹಾರಿಸಲು ಸಾಧ್ಯವಾಗಿದೆ. ತಾಲೂಕಿನ ಅಭಿವೃದ್ಧಿಗೆ ಎಲ್ಲರೂ ನನ್ನೊಂದಿಗೆ ಕೈಜೋಡಿಸಬೇಕು. ದ್ವೇಷ ರಾಜಕಾರಣ ಮಾಡದೇ ಅಭಿವೃದ್ಧಿ ಚಿಂತನೆಯೊಂದಿಗೆ ಪ್ರೀತಿ ವಿಶ್ವಾಸದ ರಾಜಕಾರಣ ಮಾಡುತ್ತೇನೆ ಎಂದರು.
ಕುಂಟಾರು ರವೀಶ ತಂತ್ರಿ ಅಭಿನಂದನಾ ಭಾಷಣ ಮಾಡಿದರು. ಜಿಲ್ಲಾ ಚುನಾವಣಾ ಸಂಚಾಲಕ ಮೋನಪ್ಪ ಭಂಡಾರಿ ಹಾಗೂ ವಿಭಾಗ ಸಹಪ್ರಭಾರಿ ಪ್ರತಾಪಸಿಂಹ ನಾಯಕ್ ಮಾತನಾಡಿ ಅಭಿನಂದಿಸಿದರು. ಕಾರ್ಯಕ್ರಮವನ್ನು ಬಿಜೆಪಿ ಹಿರಿಯ ಪ್ರಮುಖರಾದ ವಕೀಲ ನೇಮಿರಾಜ ಶೆಟ್ಟಿ ಉದ್ಘಾಟಿಸಿದರು. ವೇದಿಕೆಯಲ್ಲಿ ಜಿಲ್ಲಾ ಪ್ರಮುಖರಾದ ಶಾರದ ಆರ್. ರೈ, ಭಾಗೀರಥಿ ಮುರುಳ್ಯ, ಕ್ಯಾ ಬ್ರಿಜೇಶ್ ಚೌಟ, ಜಿಪಂ ಸದಸ್ಯರಾದ ಮಮತಾ ಎಂ. ಶೆಟ್ಟಿ, ಸೌಮ್ಯಲತಾ ಜೆ. ಗೌಡ, ತಾ.ಪಂ. ಉಪಾಧ್ಯಕ್ಷೆ ವೇದಾವತಿ, ವಿವಿಧ ಮೋರ್ಚಾಗಳ ತಾಲೂಕು ಅಧ್ಯಕ್ಷರುಗಳಾದ ಸಂಪತ್ ಬಿ. ಸುವರ್ಣ, ಶಶಿಧರ ಕಲ್ಮಂಜ, ಧನಲಕ್ಷ್ಮೀ ಜನಾರ್ಧನ್, ಸದಾಶಿವ ಕರಂಬಾರು ಮೊದಲಾದವರು ಇದ್ದರು.
ಮಂಡಲ ಉಪಾಧ್ಯಕ್ಷ ಜಯಂತ ಕೋಟ್ಯಾನ್ ಸ್ವಾಗತಿಸಿದರು. ಪ್ರ. ಕಾರ್ಯದರ್ಶಿಗಳಾದ ಸೀತಾರಾಮ ಬೆಳಾಲು ವರದಿ ವಾಚಿಸಿ, ಪ್ರಭಾಕರ ಶೆಟ್ಟಿ ಉಪ್ಪಡ್ಕ ವಂದಿಸಿದರು. ವಕೀಲ ಸುಬ್ರಹ್ಮಣ್ಯ ಕುಮಾರ್ ಅಗರ್ತ, ಉಮೇಶ ನಡ್ತಿಕಲ್ ಹಾಗೂ ಶ್ರೀನಿವಾಸ ರಾವ್ ಕಾರ್ಯಕ್ರಮ ನಿರ್ವಹಿಸಿದರು.







