ಜಹಾಂಗೀರ್ ಸಿದ್ದಿಕಿ ಅಮೆರಿಕಕ್ಕೆ ನೂತನ ಪಾಕ್ ರಾಯಭಾರಿ

ಇಸ್ಲಾಮಾಬಾದ್,ಮೇ 27: ಅಮೆರಿಕಕ್ಕೆ ಪಾಕಿಸ್ತಾನದ ನೂತನ ರಾಯಭಾರಿಯಾಗಿ ನಿಯೋಜಿತರಾಗಿರುವ ಅಲಿ ಜಹಾಂಗೀರ್ ಸಿದ್ದೀಕಿ ಅವರು ಮೇ 29ರಂದು ಅಧಿಕಾರವಹಿಸಿಕೊಳ್ಳಲಿದ್ದಾರೆ.
ಕರಾಚಿ ಮೂಲದ ಉದ್ಯಮಿ ಹಾಗೂ ಬ್ಯಾಂಕರ್ ಜಹಾಂಗೀರ್ ಸಿದ್ದೀಕಿ ಅವರ ಪುತ್ರನಾದ ಅಲಿ ಜಹಾಂಗೀರ್ ಸಿದ್ದೀಕಿ ಅವರು ನಿರ್ಗಮನ ರಾಯಭಾರಿ ಐಝಾಜ್ ಚೌಧರಿ ಅವರ ಉತ್ತರಾಧಿಕಾರಿಯಾಗಿ ನೇಮಕಗೊಳ್ಳಲಿದ್ದಾರೆ. ಮೇ 31ರಂದು ಪಾಕಿಸ್ತಾನದ ಹಾಲಿ ಸರಕಾರದ ಆಧಿಕಾರ ಮುಕ್ತಾಯಗೊಳ್ಳಲಿದ್ದು, ಅದಕ್ಕಿಂತ ಕೇವಲ ಎರಡು ದಿನ ಮೊದಲು ಜಹಾಂಗೀರ್ ಅಮೆರಿಕ ರಾಯಭಾರಿಯಾಗಿ ಅಧಿಕಾರವಹಿಸಿಕೊಳ್ಳಲಿದ್ದಾರೆ.
ಸಿದ್ದೀಕಿ ಅವರು ಈ ಮೊದಲು ಪಾಕ್ ಪ್ರಧಾನಿ ಅಬ್ಬಾಸಿ ಅವರಿಗೆ ಆರ್ಥಿಕ ಹಾಗೂ ಔದ್ಯಮಿಕ ವಿಷಯಗಳ ಕುರಿತ ವಿಶೇಷ ಸಹಾಯಕರಾಗಿ ಕೆಲಸ ಮಾಡಿದ್ದರು. ಈ ಹಿಂದೆ ಜಹಾಂಗೀರ್ ಸಿದ್ದೀಕಿ ಅವರು ಜೆ.ಎಸ್.ಬ್ಯಾಂಕ್ ಹಾಗೂ ಜೆ.ಎಸ್. ಪ್ರೈವೇಟ್ ಇಕ್ವಿಟಿ ಕಂಪೆನಿ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.
ಪ್ರತಿಪಕ್ಷಗಳಿಂದ ವ್ಯಾಪಕ ಟೀಕೆ
ಈ ಮಧ್ಯೆ ಅಮೆರಿಕಕ್ಕೆ ಪಾಕ್ ರಾಯಭಾರಿಯಾಗಿ ಜಹಾಂಗೀರ್ ಅವರ ನೇಮಕವನ್ನು ಪಾಕಿಸ್ತಾನದ ಪ್ರತಿಪಕ್ಷಗಳಿಂದ ತೀವ್ರ ಟೀಕೆ ಎದುರಾಗಿದೆ. ತನ್ನ ಉದ್ಯಮ ಪಾಲುದಾರನ ಪುತ್ರನನ್ನು ಅಮೆರಿಕಕ್ಕೆ ರಾಯಭಾರಿಯಾಗಿ ಪ್ರಧಾನಿ ಅಬ್ಬಾಸಿ ನೇಮಕ ಮಾಡಿದ್ದಾರೆಂದು ಅವು ಆರೋಪಿಸಿವೆ.
ಆದಾಗ್ಯೂ ಪಾಕ್ ಸರಕಾರವು ಸಿದ್ದೀಕಿ ಅವರ ನೇಮಕವನ್ನು ಸಮರ್ಥಿಸಿಕೊಂಡಿದೆ. ಉದ್ಯಮ ವಿಷಯಗಳಲ್ಲಿ ಸಿದ್ಧೀಕಿ ಅಗಾಧವಾದ ಅನುಭವವನ್ನು ಹೊಂದಿರುವುದರಿಂದ ಆಮೆರಿಕದ ಜೊತೆ ನಿಕಟ ಬಾಂಧವ್ಯವನ್ನು ಹೊಂದಲು ಇದು ನೆರವಾಗಲಿದೆಯೆಂದು ಪಾಕ್ ಸರಕಾರ ತಿಳಿಸಿದೆ.







