ನಾಗಮಂಗಲ: ಟಿಪ್ಪರ್ ಢಿಕ್ಕಿಯಾಗಿ ಅಪರಿಚಿತ ಬೈಕ್ ಸವಾರ ಮೃತ್ಯು

ನಾಗಮಂಗಲ, ಮೇ 27: ತಾಲೂಕಿನ ಕಾಂತಾಪುರ ಗ್ರಾಪಂ ವ್ಯಾಪ್ತಿಯ ಕಾಳೇನಹಳ್ಳಿ ಗೇಟ್ ಬಳಿ ಟಿಪ್ಪರ್ ಢಿಕ್ಕಿಯಾಗಿ ಸುಮಾರು 38 ವಯಸ್ಸಿನ ಅಪರಿಚಿತ ಬೈಕ್ ಸವಾರ ಮೃತಪಟ್ಟಿರುವ ಘಟನೆ ರವಿವಾರ ಬೆಳಗ್ಗೆ ನಡೆದಿದೆ.
ಮೃತ ವ್ಯಕ್ತಿ ಸಾಯುವ ಮುನ್ನ ತಾನು ತಾಲೂಕಿನ ಚನ್ನಾಪುರ ಗ್ರಾಮದ ನಾಗಪ್ಪ ಅವರ ಪುತ್ರ ರಾಮಣ್ಣನೆಂದು ತಿಳಿಸಿದ್ದಾನೆ. ಆದರೆ, ಚನ್ನಾಪುರದವರು ತಮ್ಮ ಗ್ರಾಮದವನಲ್ಲ ಎಂದಿದ್ದಾರೆ ಎನ್ನಲಾಗಿದೆ.
ತಾಲೂಕಿನ ಬೋಗಾದಿ ಮಾರ್ಗದಲ್ಲಿ ಕೆ.ಆರ್.ಪೇಟೆ ರಸ್ತೆಯಲ್ಲಿ ನಾಗಮಂಗಲ ಕಡೆಗೆ ಬೈಕ್‍ನಲ್ಲಿ (ಕೆಎ-04 ಟಿಆರ್ 3339) ಬರುತ್ತಿದ್ದಾಗ ಟಿಪ್ಪರ್ ಢಿಕ್ಕಿಯಾಗಿದ್ದು, ಚಾಲಕ ಟಿಪ್ಪರ್ ಸಮೇತ ಪರಾರಿಯಾಗಿದ್ದಾನೆ
ತಲೆಗೆ ಮತ್ತು ಕಾಲು ಕೈಗಳಿಗೆ ತೀವ್ರ ಪೆಟ್ಟು ಬಿದ್ದು ರಕ್ತದ ಮಡುವಿನಲ್ಲಿ ನರಳಾಡುತ್ತಿದ್ದ ವ್ಯಕ್ತಿಯನ್ನು ಸಾರ್ವಜನಿಕರು ಪಟ್ಟಣದ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಆಂಬ್ಯುಲೆನ್ಸ್ ನಲ್ಲಿ ಕರೆತಂದಿದ್ದಾರೆ. ವೈದರು ವಿಳಾಸ ಕೇಳಿದಾಗ ರಾಮಣ್ಣ ಬಿನ್ ನಾಗಪ್ಪ, ಚನ್ನಾಪುರ ಎಂದು ಮಾತನಾಡಿದ್ದಾನೆ ಎನ್ನಲಾಗಿದೆ. ನಂತರ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.
ಈತನ ಸಂಬಂಧಿಕರಿಗಾಗಿ ತಾಲೂಕಿನಲ್ಲಿ ಇರುವ ಚನ್ನಾಪುರ ಹೆಸರಿನ ಗ್ರಾಮದವರನ್ನು ಸಂಪರ್ಕಿಸಿದಾಗ ಆತ ನಮ್ಮೂರಿನವರಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದಾರೆಂದು ಪ್ರಕರಣ ದಾಖಲಿಸಿಕೊಂಡಿರುವ ಗ್ರಾಮಾಂತರ ಠಾಣೆ ಪೊಲೀಸರು ತಿಳಿಸಿದ್ದಾರೆ. ಶವವನ್ನು ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದು, ವಾರಸುದಾರರು ಯಾರಾದರೂ ಇದ್ದಲ್ಲಿ ಪೋಲಿಸ್ ಠಾಣೆ ಸಂಪರ್ಕಿಸಲು ಕೋರಲಾಗಿದೆ.







