ಮಂಡ್ಯ: ವಿಶ್ವ ಅಮ್ಮಂದಿರ ದಿನಾಚರಣೆ ಪ್ರಯುಕ್ತ ಉಚಿತ ಆರೋಗ್ಯ ತಪಾಸಣಾ ಕಾರ್ಯಕ್ರಮ

ಮಂಡ್ಯ, ಮೇ 27: ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಗೆ ಪೂಜನೀಯವಾದ ಸ್ಥಾನ ನೀಡಲಾಗಿದೆ. ಅವರನ್ನು ಅಷ್ಟೇ ಗೌರವದಿಂದ ನೋಡಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಮಿಮ್ಸ್ ವೈದ್ಯಾದಿಕಾರಿ ಡಾ. ವಿಶ್ವೇಶ್ವರ್ ತಿಳಿಸಿದ್ದಾರೆ.
ನಗರದ ಹಾಲಹಳ್ಳಿ ಬಡಾವಣೆಯ ಜ್ಞಾನಸಿಂಧು ವೃದ್ಧಾಶ್ರಮದಲ್ಲಿ ಭಾವಸಾರ ಕ್ಷತ್ರಿಯ ಮಹಿಳಾ ಮಂಡಳಿ ವತಿಯಿಂದ ವಿಶ್ವ ಅಮ್ಮಂದಿರ ದಿನಾಚರಣೆ ಅಂಗವಾಗಿ ವೃದ್ಧರಿಗೆ ರವಿವಾರ ನಡೆದ ಉಚಿತ ಆರೋಗ್ಯ ತಪಾಸಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇಂದು ವಿಶ್ವದಾದ್ಯಂತ ಅಮ್ಮಂದಿರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ನಮ್ಮಲ್ಲೂ ಸಹ ಅಮ್ಮಂದಿರ ದಿನಾಚರಣೆಯನ್ನು ಆಚರಿಸುವುದರ ಜೊತೆಗೆ ಹಲವಾರು ಸಮಾಜ ಸೇವಾ ಕಾರ್ಯಗಳನ್ನು ಕೈಗೊಂಡು ಮಹಿಳೆಯರಿಗೆ ಗೌರವ ತರುವ ರೀತಿ ನಡೆದುಕೊಳ್ಳುತ್ತಿರುವುದು ಶ್ಲಾಘನೀಯ ಎಂದರು.
ಭಾವಸಾರ ಕ್ಷತ್ರಿಯ ಮಹಿಳಾ ಸಂಘದ ಅಧ್ಯಕ್ಷೆ ಪುಷ್ಪಲತಾ ಮಾಳೋದೆ ಮಾತನಾಡಿ, ನಮ್ಮ ಸಂಘದ ವತಿಯಿಂದ 12 ವರ್ಷಗಳಿಂದಲೂ ನಿರಂತರವಾಗಿ ಸಮಾಜಸೇವಾ ಕಾರ್ಯಗಳನ್ನು ಹಮ್ಮಿಕೊಂಡು ಬರುತ್ತಿದ್ದೇವೆ. ಈ ಬಾರಿ ವಿಶ್ವ ಅಮ್ಮಂದಿರ ದಿನಾಚರಣೆ ಅಂಗವಾಗಿ ವೃದ್ಧರ ಆರೋಗ್ಯ ತಪಾಸಣೆ ಕಾರ್ಯಕ್ರಮ ಏರ್ಪಡಿಸಿದ್ದೇವೆ ಎಂದರು.
ಈಗಾಗಲೇ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಆರೋಗ್ಯ ತಪಾಸಣಾ ಶಿಬಿರ, ದೇವತಾ ಕಾರ್ಯಗಳನ್ನು ನಡೆಸಲಾಗಿದೆ. ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕಗಳನ್ನು ವಿತರಿಸಿದ್ದೇವೆ. ಮಹಿಳೆಯರಿಗೆ ಗೌರವ ತಂದುಕೊಡುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ ಎಂದು ಅವರು ಹೇಳಿದರು.







