ಸಮಾಜಕ್ಕೆ ಒಳಿತು ಬಯಸುವುದು ಪ್ರತೀ ಮನುಷ್ಯನ ಕರ್ತವ್ಯ: ಹಿರಿಯ ನಟಿ ಡಾ.ಭಾರತಿ ವಿಷ್ಣುವರ್ಧನ್

ಚಿಕ್ಕಮಗಳೂರು, ಮೇ 27: ಸಮಾಜದಲ್ಲಿ ಮನುಷ್ಯನಾಗಿ ಹುಟ್ಟಿದ ಮೇಲೆ ಮಾನವೀಯತೆಯ ಗುಣ ಅಳವಡಿಸಿಕೊಳ್ಳಲೇ ಬೇಕು. ಯಾರಿಗೂ ಕೇಡನ್ನು ಬಯಸಬಾರದು. ಕೆಟ್ಟದ್ದನ್ನು ಕೇಳದೇ, ಕೆಟ್ಟದ್ದನ್ನು ನೋಡದೇ, ಕೆಟ್ಟದ್ದನ್ನು ಮಾತನಾಡದಿರವು ಮನುಷ್ಯನ ಎಲ್ಲ ರೀತಿಯ ಏಳಿಗೆಗೆ ಸಹಕಾರಿ. ತಾನು ಹೀಗೆಯೇ ಇದ್ದೇನೆ. ಇದೇ ನನ್ನ ಚಿರಯೌವ್ವನದ ಗುಟ್ಟು ಎಂದು ಖ್ಯಾತ ಚಲನಚಿತ್ರ ನಟಿ ಪದ್ಮಶ್ರೀ ಡಾ.ಭಾರತಿ ವಿಷ್ಣುವರ್ಧನ್ ಅಭಿಪ್ರಾಯಿಸಿದ್ದಾರೆ.
ಪೂರ್ವಿ ಸುಗಮಸಂಗೀತ ಅಕಾಡೆಮಿ ಮತ್ತು ಯುರೇಕಾ ಅಕಾಡೆಮಿಯ ಕುವೆಂಪು ಕಲಾಮಂದಿರದಲ್ಲಿ ಆಯೋಜಿಸಿದ್ದ ಖ್ಯಾತ ನಟಿ ಪದ್ಮಶ್ರೀ ಡಾ.ಭಾರತಿವಿಷ್ಣುವರ್ಧನ್ ಅಭಿನಂದನೆ ಹಾಗೂ ಭಾರತಿ ಮತ್ತು ವಿಷ್ಣು ನಟಿಸಿರುವ ಚಲನಚಿತ್ರಗೀತೆಗಳ ಗಾಯನ ಒಲುಮೆ ಸಿರಿ ಕಾರ್ಯಕ್ರಮದಲ್ಲಿ ಅಭಿನಂದನೆಗೆ ಸ್ವೀಕರಿಸಿ ಅವರು ಮಾತನಾಡಿದರು.
ಇರುವವರೆಗೂ ನಮ್ಮ ಕರ್ಮ ಮಾಡುವುದಷ್ಟೇ ನಮ್ಮ ಕರ್ತವ್ಯ. ಮಿಕ್ಕಿದ್ದೆಲ್ಲಾ ಭಗವಂತನ ಧಯೆ. ಏಕೆ, ಹೇಗೆ ಎಂಬುದು ಯಾರಿಗೂ ಅರ್ಥವಾಗುವುದಿಲ್ಲ. ನಾವು ಬೊಂಬೆಗಳು ಮಾತ್ರ. ಭಗವದ್ಗೀತೆಯಲ್ಲಿ ಹೇಳುವುದು ಕರ್ಮ ಮಾಡು ಎಂದು ಮಾತ್ರ. ವಾಸ್ತವವಾಗಿ ಇದು ಸುಲಭದ ದಾರಿ. ಕಷ್ಟಬಂದರೆ ಬೇಡ, ಸುಖಬಂದರೆ ಮಾತ್ರ ಬೇಕು ಎಂಬುದಲ್ಲ. ಕಷ್ಟ ಮತ್ತು ಸುಖ ಎರಡೂ ನಮ್ಮದಲ್ಲ. ಎಲ್ಲವನ್ನೂ ದೇವರೇ ನೋಡಿಕೊಳ್ಳುತ್ತಾನೆ ಎಂದು ಆಧ್ಯಾತ್ಮದ ಬಗ್ಗೆ ಮಾತನಾಡಿದ ಅವರು, ಯಾರಿಗೆ ಯಾರನ್ನೂ ಹೋಲಿಕೆ ಮಾಡಬಾರದು. ಅವರವರ ಶಕ್ತಿ ಸಾಮರ್ಥ್ಯ, ಆಸಕ್ತಿ ಭಿನ್ನವಾಗಿರುತ್ತದೆ. ಹೋಲಿಕೆ ಎಂದೂ ಸರಿಯಲ್ಲ ಎಂದರು.
ಪತಿ ವಿಷ್ಣವರ್ಧನರಿಗೆ ಹಾಡುಗಾರಿಕೆಯಲ್ಲಿ ಹೆಚ್ಚಿನ ಆಸಕ್ತಿ ಎಂದು ನೆನಪಿಸಿಕೊಂಡ ಭಾರತಿ ವಿಷ್ಟುವರ್ಧನ್, ಆಗ ವೈದ್ಯ ಸ್ನೇಹಿತರನ್ನು ಸೇರಿಸಿಕೊಂಡು ಸ್ನೇಹಲೋಕ ಕ್ಲಬ್ ಮಾಡಿಕೊಂಡು ಆರ್ಕೇಸ್ಟ್ರಾವನ್ನು ವಿವಿಧೆಡೆ ತೆಗೆದುಕೊಂಡು ಹೋಗುತ್ತಿದ್ದರು. ತಾಳ ರಾಗ ಇಲ್ಲದಿದ್ದರೂ ಹಾಡುತ್ತಾ ಹಾಡುತ್ತಾ ಕಾರ್ಯಕ್ರಮ ಕೊಡಲಾಗುತ್ತಿತ್ತು. ಇದೇ ರೀತಿ ಕ್ರಿಕೆಟ್ ಕ್ಲಬ್ ಕಟ್ಟಿದ್ದರು. ಇವೆಲ್ಲವನ್ನೂ ವಿಭಾ ಚಾರಿಟೇಬಲ್ ಟ್ರಸ್ಟ್ ಮೂಲಕ ಸದ್ಯ ನಿರ್ವಹಿಸಲಾಗುತ್ತಿದೆ ಎಂದು ವಿವರಿಸಿದರು.
ಕನ್ನಡ ಸಾಹಿತ್ಯ ಪೂಜಾರಿ ಹಿರೇಮಗಳೂರು ಕಣ್ಣನ್ ಮಾತನಾಡಿ, ವಿಷ್ಣು-ರಾಜ್ ನಟಿಸಿದ ಅಂದಿನ ಸಿನಿಮಾ ಬೇಡರ ಕಣ್ಣಪ್ಪ. ಆದರೆ ಇಂದಿನ ಸಿನಿಮಾ ಬೇಡಕಣಪ್ಪ ಎಂಬಂತಾಗಿದೆ. ಕನ್ನಡದ ಕಂಪು ಮನಕ್ಕೆ ಇಂಪಾಗಬೇಕು. ಸಂಸ್ಕೃತಿ ಬಿಂಬಿಸುವುದೇ ನಿಜವಾದ ಚಿರಜೀವಿತನ ಎಂದರು.
ಯುರೇಕಾ ಅಕಾಡೆಮಿ ಅಧ್ಯಕ್ಷ ದೀಪಕ್ ದೊಡ್ಡಯ್ಯ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಹೃದಯದ ಭಾಷೆ ಎಲ್ಲರಿಗೂ ಅರ್ಥವಾಗುತ್ತದೆ. ಮಾತಿಗಿಂತ ಕೃತಿ ಮುಖ್ಯ ಎಂಬ ಭಾರತಿ ಅವರ ಸಂದೇಶ ಆದರ್ಶಪ್ರಾಯ ಎಂದರು.
ಸಾಹಿತಿ ಕಲ್ಕಟ್ಟೆ ಪುಸಕ್ತಮನೆಯ ವ್ಯವಸ್ಥಾಪಕ ಎಚ್.ಎಂ.ನಾಗರಾಜರಾವ್ ಮಾತನಾಡಿ, ಸಾತ್ವಿಕ ಯಶಸ್ಸಿಗೆ ಶಾಶ್ವತಸ್ಥಾನ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ವಿಷ್ಣು ಮತ್ತು ಭಾರತಿ ಅವರದ್ದು ಲೌಕಿಕ ಸಂಬಂಧವಷ್ಟೇ ಅಲ್ಲ, ದೈವಿಕ ಸಂಬಂಧ. ಇದೊಂದು ಧಾರ್ಮಿಕ ಕುಟುಂಬ. ಕಲಾ ಪ್ರಪಂಚದಲ್ಲಿ ತನ್ನದೇ ಕೊಡುಗೆ ನೀಡಿದೆ ಎಂದರು.
ನಗರಸಭಾ ಅಧ್ಯಕ್ಷೆ ಶಿಲ್ಪಾರಾಜಶೇಖರ್ ಮತ್ತು ಸದಸ್ಯ ಎಂ.ಆರ್.ದೇವರಾಜಶೆಟ್ಟಿ ಮಾತನಾಡಿದರು. ಆಶಾಕಿರಣ ಅಂಧ ಮಕ್ಕಳ ಶಾಲೆಯ ಡಾ.ಜೆ.ಪಿಕೃಷ್ಣೇಗೌಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅಧ್ಯಕ್ಷ ಬೆಂಗಳೂರಿನ ಸ್ಟಾರ್‍ಸಿಂಗರ್ ಖ್ಯಾತಿಯ ರಮ್ಯಾಪ್ರಸನ್ನರಾವ್ ಅವರಿಗೆ ಪೂರ್ವಿ ನಾದೋಪಾಸನಾ ಪ್ರಶಸ್ತಿನೀಡಿ ಗೌರವಿಸಲಾಯಿತು. ನಗರದ ಸಂಗೀತಕಲಾವಿದರು ವಿಷ್ಣು ಮತ್ತು ಭಾರತಿ ಅಭಿನಯದ ಚಲನಚಿತ್ರಗಳ ಗೀತೆಗಳನ್ನು ಹಾಡಿದರು. ಪೂರ್ವಿ ಸುಗಮಸಂಗೀತಗಂಗಾ ಅಕಾಡೆಮಿ ಮುಖ್ಯಸ್ಥ ಎಂ.ಆರ್.ಸುಧೀರ್ ಸ್ವಾಗತಿಸಿ, ಗಾಯಕ ರಾಯ್‍ನಾಯಕ್ ವಂದಿಸಿದರು. ಸುಮಾಪ್ರಸಾದ್ ಮತ್ತು ರೂಪಾ ಕಾರ್ಯಕ್ರಮ ನಿರೂಪಿಸಿದರು.
ನಿಮ್ಮ ಕಾಲದ ಚಲನಚಿತ್ರಕ್ಕೂ ಇಂದಿನ ಚಿತ್ರಗಳಿಗೂ ಹೋಲಿಸಿದಾಗ ಸಮಾಜಕ್ಕೆ ಒಳಿತಿದೆ ಎನಿಸುತ್ತಿದೆಯೇ ಎಂಬ ಸಭಿಕರ ಪ್ರಶ್ನೆಗೆ ಉತ್ತರಿಸಿದ ಭಾರತಿ, ಇತ್ತೀಚಿನ ಚಿತ್ರಗಳಲ್ಲೂ ಒಳ್ಳೆಯ ಅಂಶಗಳನ್ನು ಅಲ್ಲಿಲ್ಲಿ ಕಾಣಬಹುದು ಎಲ್ಲ ಕಾಲ ಘಟ್ಟದಲ್ಲೂ ಒಳ್ಳೆಯ ಕೆಟ್ಟ ಸಿನೆಮಾಗಳು ತಯಾರಾಗುತ್ತವೆ. ಆದರೆ ಯಾವುದೇ ಸಿನೆಮಾದ ಮುಖ್ಯ ಉದ್ದೇಶ ಸಮಾಜಕ್ಕೊಂದು ಸಂದೇಶ ನೀಡುವುದಾಗಿರಬೇಕು. ಹಿಂದಿನ ಕಾಲದ ಸಿನೆಮಾಗಳಲ್ಲಿ ಇಂತಹ ಸಂದೇಶಗಳೇ ಹೆಚ್ಚಿರುತ್ತಿದ್ದವು. ಪ್ರಸಕ್ತ ಸಿನೆಮಾ ಉದ್ಯಮವಾಗಿರುವುದರಿಂದ ಸಾಮಾಜಿಕ ಸಂದೇಶಕ್ಕಿಂತ ಲಾಭ ಮಾಡುವ ಕಥಾ ವಸ್ತುವೇ ಮುಖ್ಯವಾಗಿರುವುದು ವಿಪರ್ಯಾಸ.
1950ರ ಸ್ವಾತಂತ್ರ್ಯೋತ್ಸವದ ಆಗಸ್ಟ್ 15 ರಂದು ಜನಿಸಿದ ಭಾರತಿ ಪಂಚಾಭಾಷಾ ತಾರೆ. ರಾಜ್ಯಮಟ್ಟದ ಥ್ರೋಬಾಲ್ ಆಟಗಾರ್ತಿ. 1975ರಲ್ಲಿ ವಿಷ್ಣವರ್ಧನರನ್ನು ಕೈಹಿಡಿದು 40 ವರ್ಷಗಳಿಗೂ ಅಧಿಕ ಕಾಲ ಕನ್ನಡದ ಕೆಲಸವನ್ನು ಜೊತೆಯಾಗಿ ನಿರ್ವಹಿಸಿದ್ದಾರೆ. ಈ ದಂಪತಿ ನಟನೆ, ನಿರ್ದೇಶನ, ಗಾಯನದಲ್ಲೂ ಹೆಸರಾಗಿದ್ದರು. ಡಾ.ವಿಷ್ಣುವರ್ಧನ್ ಅಗಲಿಕೆಯ ನಂತರ ಸ್ಮಾರಕ ನಿರ್ಮಾಣ ಸ್ವಲ್ಪ ವಿವಾದಾಸ್ಪದವಾಗಿತ್ತು. ಈಗ ಅದು ಮೈಸೂರಿನಲ್ಲಿ ನಿರ್ಮಾಣಗೊಳ್ಳಲಿದೆ. ಈ ವಿಚಾರವನ್ನು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲೂ ಪ್ರಸ್ತಾಪಿಸಿದ್ದ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿರುವುದರಿಂದ ಶೀಘ್ರ ಕಾರ್ಯರೂಪಕ್ಕೆ ಬರಲಿದೆ.
- ಡಾ.ಜೆ.ಪಿ.ಕೃಷ್ಣೇಗೌಡ, ಆಶಾಕಿರಣ ಅಂಧ ಮಕ್ಕಳ ಶಾಲೆಯ ಅಧ್ಯಕ್ಷ







