ಹೆಜಮಾಡಿ: ಒಳರಸ್ತೆಯಲ್ಲಿ ಟೋಲ್ ನಿರ್ಮಾಣದ ವಿರುದ್ಧ ಪ್ರತಿಭಟನೆ

ಪಡುಬಿದ್ರೆ, ಮೇ 28: ಹೆಜಮಾಡಿಯಲ್ಲಿ ಒಳರಸ್ತೆಗೆ ಟೋಲ್‌ಗೇಟ್ ನಿರ್ಮಾಣ ಮಾಡುತ್ತಿರುವುದನ್ನು ವಿರೋಧಿಸಿ ಹಾಗೂ ಟೋಲ್‌ಗೇಟ್ ಬಳಿಯ ಗೂಡಂಗಡಿಗಳನ್ನು ತೆರವುಗೊಳಿಸುವುದನ್ನು ವಿರೋಧಿಸಿ ಟೋಲ್ ವಿರೋಧಿ ಹೋರಾಟ ಸಮಿತಿಯ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು.
ಹೆಜಮಾಡಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಟೋಲ್‌ಗೇಟ್ ನಿರ್ಮಾಣದ ಬಳಿಕ ಟೋಲ್‌ತಪ್ಪಿಸುವ ನಿಟ್ಟಿನಲ್ಲಿ ಕೆಲ ವಾಹಗಳು ಒಳರಸ್ತೆಯಲ್ಲಿ ಸಂಚರಿಸುತ್ತಿವೆ. ಇದ್ಕಕಾಗಿ ನವಯುಗ ಕಂಪೆನಿ ಒಳರಸ್ತೆಗೂ ಟೋಲ್ ನಿರ್ಮಾಣ ಮಾಡುತ್ತಿದೆ. ಆದರೆ ಹೆಜಮಾಡಿ ನಾಗರಿಕರ ಒತ್ತಾಯ ಹಾಗೂ ಪಂಚಾಯತ್ ನೀಡಿದ ಹಲವು ಬೇಡಿಕೆಗಳನ್ನು ಕಂಪೆನಿ ಈಡೇರಿಸಿಲ್ಲ. ಅವುಗಳ ಈಡೇರಿಕೆ ಆಗುವವರೆಗೆ ಟೋಲ್‌ಬೂತ್ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ಹೆದ್ದಾರಿ ಟೋಲ್‌ಗೇಟ್ ನಿರ್ಮಾಣದ ಬಳಿಕ ಇದರ ಸುತ್ತಮುತ್ತ 20ಕ್ಕೂ ಅಧಿಕ ಗೂಡಂಗಡಿಗಳು ನಿರ್ಮಾಣವಾಗಿದ್ದು, ಇವುಗಳನ್ನು ತೆರವುಗೊಳಿಸಲು ಸೋಮವಾರ ನವಯುಗ ಕಂಪೆನಿ ಮುಂದಾಗಿತ್ತು. ಇದನ್ನು ಕೂಡಾ ಪ್ರತಿಭಟನಾಕಾರರು ವಿರೋಧಿಸಿದರು. ಹೆದ್ದಾರಿ ರಚನೆ ಆದಾಗ ಇಲ್ಲಿನ ಬಹುತೇಕ ಜನರು ವ್ಯವಸಾಯ, ವ್ಯಾಪಾರ, ಜಮೀನು ಕಳೆದುಕೊಂಡಿದ್ದಾರೆ. ಅದರಲ್ಲಿ ಕೆಲವು ಅಸಹಾಯಕರು ಜೀವನೋಪಾಯಕ್ಕಾಗಿ ಇಲ್ಲಿ ಗೂಡಂಗಡಿಗಳನ್ನು ತೆರೆದಿದ್ದಾರೆ. ಆದ್ದರಿಂದ ಯಾವುದೇ ಕಾರಣಕ್ಕೂ ಈ ಗೂಡಂಗಡಿಗಳನ್ನು ತೆರವುಗೊಳಿಸಬಾರದು ಎಂದು ಒತ್ತಾಯಿಸಿದರು.
ಬೇಡಿಕೆಗಳು: ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಯ ವೇಳೆ ತೆರವುಗೊಳಿಸಿರುವ ಸಾರ್ವಜನಿಕ ಕುಡಿಯುವ ನೀರಿನ ಪೈಪ್‌ಲೈನ್ ಅನ್ನು ಮತ್ತೆ ಅಳವಡಿಸಬೇಕು. ಟೋಲ್‌ಗೇಟ್ ಬಳಿ ಕೊರೆಯಲಾಗಿರುವ ಕೊಳವೆಬಾವಿಯನ್ನು ಗ್ರಾಪಂಗೆ ಹಸ್ತಾಂತರಿಸಬೇಕು. ಹೆಜಮಾಡಿಯ ರಾಷ್ಟ್ರೀಯ ಹೆದ್ದಾರಿ ಸಂಪರ್ಕಿಸುವ ಶಿವ ನಗರದ ಬಳಿ ಕೂಡಲೇ ಮೇಲ್ಸೇತುವೆ ನಿರ್ಮಿಸಬೇಕು. ದಾರಿ ದೀಪ ಅಳವಡಿಸಬೇಕು. ಹೆದ್ದಾರಿಯಿಂದ ಗುಡ್ಡೆಯಂಗಡಿ ರಸ್ತೆಗೆ ಡಾಮರೀಕರಣ ಮಾಡಬೇಕು. ಟೋಲ್‌ಗೇಟ್ ನಿರ್ಮಾಣದಿಂದ ನಿರ್ವಸಿತರಾದವರಿಗೆ ಹೆಜಮಾಡಿಯಲ್ಲಿ ಸೂಕ್ತ ನಿವೇಶನ ಒದಗಿಸಬೇಕು. ನಿರ್ವಸಿತರಿಗೆ ಮನೆ ನಿರ್ಮಾಣದ ವೇಳೆ ಏಕರೂಪದ ಮಾನದಂಡ ಪಾಲಿಸಬೇಕು. ಗ್ರಾಪಂ ಪರವಾನಿಗೆ ಪಡೆಯದೆ ಟೋಲ್‌ಗೇಟ್ ನಿರ್ಮಾಣ ಮಾಡಿದ್ದು, ಅದರ ಕಟ್ಟಡ ತೆರಿಗೆಯನ್ನು ಕೂಡಲೇ ಕಟ್ಟಬೇಕು. ಹೆದ್ದಾರಿ ಪ್ರಾಧಿಕಾರದ ನಿಮಯದಂತೆ ಶೇ.2ರಷ್ಟು ಸಿಎಸ್‌ಆರ್ ನಿಧಿಯನ್ನು ಗ್ರಾಪಂಗೆ ನೀಡಬೇಕು. ಈ ಎಲ್ಲ ಬೇಡಿಕೆಗಳನ್ನು ಈಡೇರಿಸಿದ ಬಳಿಕವೇ ಒಳರಸ್ತೆಗೆ ಟೋಲ್‌ಗೇಟ್ ನಿರ್ಮಿಸಲು ಅವಕಾಶ ಮಾಡಿಕೊಡುವುದಾಗಿ ಪ್ರತಿಭಟನಾಕಾರರು ಹೇಳಿದರು.
ಈ ಸಂದರ್ಭ ಶಾಸಕ ಲಾಲಾಜಿ ಮೆಂಡನ್, ಟೋಲ್ ವಿರೋಧಿ ಹೊರಾಟ ಸಮಿತಿಯ ಗುಲಾಂ ಮುಹಮ್ಮದ್, ಶೇಖರ್ ಹೆಜಮಾಡಿ, ಜಿಪಂ ಸದಸ್ಯ ಶಶಿಕಾಂತ್ ಪಡುಬಿದ್ರೆ, ಹೆಜಮಾಡಿ ಗ್ರಾಪಂ ಅಧ್ಯಕ್ಷ ವಿಶಾಲಾಕ್ಷಿ ಪುತ್ರನ್, ಉಪಾಧ್ಯಕ್ಷ ಸುಧಾಕರ ಕರ್ಕೇರ ಮತ್ತಿತರರು ಉಪಸ್ಥಿತರಿದ್ದರು.







