ಮಳೆಗಾಲದ ಕಾಮಗಾರಿಗಳಿಗೆ ಪುರಸಭೆಯಿಂದ ಸಿದ್ಧತೆ : ಮುಖ್ಯಾಧಿಕಾರಿ ರೇಖಾ ಶೆಟ್ಟಿ

ಮೂಡುಬಿದಿರೆ, ಮೇ 28: ಮಳೆಗಾಲವು ಆರಂಭಗೊಂಡಿದ್ದು ಈ ನಿಟ್ಟಿನಲ್ಲಿ ಮೂಡುಬಿದಿರೆ ಪುರಸಭೆಯು ಮಳೆಗಾಲದಲ್ಲಿ ಆಗಬೇಕಾಗಿರುವ ಕಾಮಗಾರಿ ಗಳನ್ನು ಮಾಡಲು ಸಕಲ ರೀತಿಯಲ್ಲಿ ಸಿದ್ಧತೆಯನ್ನು ನಡೆಸುತ್ತಿದೆ ಎಂದು ಪುರಸಭೆಯ ಮುಖ್ಯಾಧಿಕಾರಿ ರೇಖಾ ಶೆಟ್ಟಿ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಪುರಸಭೆಗೆ ಒಳಪಟ್ಟ 23 ವಾರ್ಡುಗಳಲ್ಲಿ ಹೂಳೆತ್ತುವ ಕಾಮಗಾರಿಗಳಿಗೆ ಈಗಾಗಲೇ ರೂ 1 ಲಕ್ಷದಂತೆ ಅಂದಾಜುಪಟ್ಟಿಯನ್ನು ಮಾಡಲಾಗಿದ್ದು ಅನುಮೋದನೆಗಾಗಿ ಜಿಲ್ಲಾಡಳಿತಕ್ಕೆ ಕಳುಹಿಸಿಕೊಡಲಾಗಿದೆ. ಆದ್ಯತೆಯ ಮೇರೆಗೆ ರಸ್ತೆ ಮತ್ತು ಚರಂಡಿಗಳಲ್ಲಿ ತುಂಬಿರುವ ಹೂಳನ್ನು ತೆಗೆಯಲು ಪೌರಕಾರ್ಮಿಕರಿಗೆ ಸೂಚನೆ ನೀಡಲಾಗಿದೆ.
ಅಂಗಡಿ, ಮನೆ, ರಸ್ತೆ ಹಾಗೂ ಖಾಸಗಿ ಸ್ಥಳಗಳಲ್ಲಿರುವ ಅಪಾಯಕಾರಿ ಮರಗಳನ್ನು ಗುರುತಿಸಿ ತೆರವುಗೊಳಿಸಲು ವಲಯ ಅರಣ್ಯಾಧಿಕಾರಿಗಳ ಗಮನಕ್ಕೆ ತರಲಾಗುವುದು ಹಾಗೂ ಮುಂಗಾರು ಅವಧಿಯಲ್ಲಿ ಪ್ರಕೃತಿ ವಿಕೋಪಗಳ ಕಂಡು ಬರುವ ಹಿನ್ನಲೆಯಲ್ಲಿ ಮುಂಜಾಗ್ರತ ಕ್ರಮವಾಗಿ ಜಿಲ್ಲಾಧಿಕಾರಿಗಳ ಆದೇಶದಂತೆ ಕ್ರಮಕೈಗೊಳ್ಳಲಾಗುವುದು ಅಲ್ಲದೆ ಈ ಬಗ್ಗೆ ಶೀಘ್ರವಾಗಿ ಕ್ರಮ ತೆಗೆದುಕೊಳ್ಳಲು ಈಗಾಗಲೇ 9 ಟೀಮ್‌ಗಳನ್ನು ರಚಿಸಲಾಗಿದೆ.
ಮಳೆಗಾಲದಲ್ಲಿ ಕಂಡು ಬರುವ ಮಲೇರಿಯಾ, ಚಿಕೂನ್ ಗೂನ್ಯಾ ಹಾಗೂ ನಿಫಾದಂತೆ ಕಾಯಿಲೆಗಳ ಬಗ್ಗೆ ಜನರಿಗೆ ಅರಿವು ಮೂಡಿಸಲು ಸಮುದಾಯ ಆರೋಗ್ಯ ಕೇಂದ್ರದ ಸಹಕಾರದೊಂದಿಗೆ ರೋಟರಿ ಸಹಿತ ಇತರ ಸಂಘ ಸಂಸ್ಥೆಗಳ ಮೂಲಕ ಸ್ವಸಹಾಯ ಸಂಘಗಳಿಗೆ ಮತ್ತು ಸಾರ್ವಜನಿಕರಿಗೆ ಕರಪತ್ರಗಳನ್ನು ಹಂಚಲಾಗುವುದು ಎಂದು ಮುಖ್ಯಾಧಿಕಾರಿ ತಿಳಿಸಿದ್ದಾರೆ.







