ಎಚ್‌ಡಿಕೆ ರಾಜ್ಯದ ಜನತೆಯ ಕ್ಷಮೆ ಕೋರಬೇಕು: ಮಾಜಿ ಡಿಸಿಎಂ ಆರ್.ಅಶೋಕ್

ಬೆಂಗಳೂರು, ಮೇ 28: ‘ನಾನು ರಾಜ್ಯದ ಜನರ ಮುಲಾಜಿನಲ್ಲಿಲ್ಲ’ ಎಂಬ ಸಿಎಂ ಕುಮಾರಸ್ವಾಮಿ ಹೇಳಿಕೆ ಸಲ್ಲ. ಜೆಡಿಎಸ್‌ನ 37ಮಂದಿ ಶಾಸಕರನ್ನು ಗೆಲ್ಲಿಸಿದ್ದು, ನಮ್ಮ ರಾಜ್ಯದವರೇ ಹೊರತು ಬೇರೆ ರಾಜ್ಯದವರಲ್ಲ. ಹೀಗಾಗಿ ಕುಮಾರಸ್ವಾಮಿ ಕೂಡಲೇ ಜನತೆಯ ಕ್ಷಮೆ ಕೋರಬೇಕೆಂದು ಮಾಜಿ ಡಿಸಿಎಂ ಆರ್.ಅಶೋಕ್ ಆಗ್ರಹಿಸಿದ್ದಾರೆ.
ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಸರಕಾರದಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದರೂ, ಅವರು ಕರ್ನಾಟಕ ರಾಜ್ಯದ ಆರೂವರೆ ಕೋಟಿ ಜನರ ಮುಖ್ಯಮಂತ್ರಿ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದವರು ಇನ್ನು ಮುಂದೆ ಪದ್ಮಾನಾಭನಗರಕ್ಕೆ ಫಲಾಯನ ಮಾಡಲಿದ್ದಾರೆ. ಅವರೆಲ್ಲರೂ ಜೆಡಿಎಸ್ ಕೈಯಲ್ಲಿದ್ದು, ಜೆಡಿಎಸ್ ಮುಖಂಡರು ಧರ್ಮ ರಾಜಕಾರಣದಲ್ಲಿ ತೊಡಗಿದ್ದಾರೆ. ಅವರ ಸಿದ್ಧಾಂತವೇ ಬೇರೆ. ಇವರ ಸಿದ್ಧಾಂತವೇ ಬೇರೆ ಎಂದು ಟೀಕಿಸಿದರು.
ಅಕ್ರಮಕ್ಕೂ ನಂಟು: ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಅವರಿಗೂ ಅಕ್ರಮಗಳಿಗೂ ಬಿಡದ ನಂಟು. ಗುರುತಿನ ಚೀಟಿ ಪತ್ತೆ ಹಿನ್ನೆಲೆಯಲ್ಲಿ ಮುಂದೂಡಲಾಗಿದ್ದ ಆರ್. ಆರ್.ನಗರ ಕ್ಷೇತ್ರ ಚುನಾವಣೆ ಹಿನ್ನೆಲೆಯಲ್ಲಿ ತಾನು ಮತ ಚಲಾಯಿಸಿದ್ದು, ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆಂದು ವಿಶ್ವಾಸ ವ್ಯಕ್ತಪಡಿಸಿದರು.







