ಬಿ.ಎಮ್.ರೋಹಿಣಿ ಅವರಿಗೆ 'ವಿಶುಕುಮಾರ್ ಪ್ರಶಸ್ತಿ'

ಮಂಗಳೂರು, ಮೇ 28: ಲೇಖಕಿ, ಹಿರಿಯ ಸಾಹಿತಿ ಬಿ.ಎಮ್.ರೋಹಿಣಿ ಇವರು ಯುವವಾಹಿನಿ ಸಂಸ್ಥೆಯ 2017 ರ ವಿಶುಕುಮಾರ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಕಾದಂಬರಿ, ವಿಮರ್ಶೆ, ಅಧ್ಯಯನ ಸಾಹಿತ್ಯ ಹೀಗೆ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಛಾಪನ್ನು ಮೂಡಿಸಿದ ಬಿ.ಎಮ್.ರೋಹಿಣಿ ಇವರ ಸಮಗ್ರ ಸಾಹಿತ್ಯ ಸೇವೆಯನ್ನು ಪರಿಗಣಿಸಿ 2017 ರ ವಿಶುಕುಮಾರ್ ಪ್ರಶಸ್ತಿಗೆ ವಿಶುಕುಮಾರ್ ಪ್ರಶಸ್ತಿ ಪ್ರದಾನ ಆಯ್ಕೆ ಸಮಿತಿ ಆಯ್ಕೆ ಮಾಡಿದೆ .ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಯುವವಾಹಿನಿ (ರಿ) ಮಂಗಳೂರು ಮಹಿಳಾ ಘಟಕದ ಆತಿಥ್ಯದಲ್ಲಿ ಜೂನ್ 3 ರಂದು ಅಪರಾಹ್ನ 3 ಗಂಟೆಗೆ ಯುವವಾಹಿನಿ ಸಭಾಂಗಣ, ಉರ್ವಾಸ್ಟೋರ್ ಮಂಗಳೂರು ಇಲ್ಲಿ ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಕಥೆ, ಕಾದಂಬರಿಕಾರರಾಗಿ, ನಟ ನಾಟಕಕರ್ತರಾಗಿ, ತಮ್ಮ ಐದು ದಶಕಗಳ ಬದುಕಿನಲ್ಲಿ ಬಹುಮುಖ ಪ್ರತಿಭೆಯಿಂದ ಕನ್ನಡ ಹಾಗೂ ತುಳು ಭಾಷೆಗಳೆರಡರಲ್ಲೂ ಕಲಾ ಸೇವೆ ಮಾಡಿ ಅಲ್ಪ ಆಯುಷ್ಯದಲ್ಲೇ ಸಂದು ಹೋದ ವಿಶುಕುಮಾರರ ಗೌರವಾರ್ಥವಾಗಿ ಯುವವಾಹಿನಿ ಸಂಸ್ಥೆಯ ವತಿಯಿಂದ ನೀಡಲಾಗುತ್ತಿರುವ ವಿಶುಕುಮಾರ್ ಪ್ರಶಸ್ತಿ 2017 ನ್ನು ಹಿರಿಯ ಸಾಹಿತಿ ಬಿ.ಎಮ್. ರೋಹಿಣಿ ಇವರಿಗೆ ಪ್ರದಾನ ಮಾಡುವ ಸಮಾರಂಭದಲ್ಲಿ ಸಹೃದಯಿ ಸಾಹಿತ್ಯ ಪ್ರೇಮಿಗಳು ಭಾಗವಹಿಸಿ ಯಶಸ್ವೀಗೊಳಿಸಬೇಕೆಂದು ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಯಶವಂತ ಪೂಜಾರಿ ವಿನಂತಿಸಿದ್ದಾರೆ.







