ಗೌರಿ ಲಂಕೇಶ್ ಹತ್ಯೆ ಪ್ರಕರಣ: ಚಾರ್ಜ್‌ಶೀಟ್ ಸಲ್ಲಿಕೆ ಸಾಧ್ಯತೆ

ಬೆಂಗಳೂರು, ಮೇ 28: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ಸಿಟ್ ತನಿಖಾಧಿಕಾರಿಗಳು ಶೀಘ್ರದಲ್ಲಿಯೇ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ಪ್ರಕರಣದ ಶಂಕಿತ ಆರೋಪಿ ನವೀನ್ ಕುಮಾರ್ ಹೇಳಿಕೆ, ಸಾಕ್ಷಿಗಳ ಹೇಳಿಕೆ, ಎಫ್‌ಎಸ್‌ಎಲ್ ತಜ್ಞರ ಹೇಳಿಕೆ ಮುಕ್ತಾಯವಾಗಿರುವ ಕಾರಣದಿಂದಾಗಿ ಚಾರ್ಜ್‌ಶೀಟ್ ಸಲ್ಲಿಸುವ ಜೊತೆಗೆ ಆರೋಪಿಗಳ ಹುಡುಕಾಟವೂ ಮುಂದುವರಿಯಲಿದೆ ಎಂದು ಹೇಳಲಾಗುತ್ತಿದೆ.
ಜಾಮೀನು: ಆರೋಪಿ ಬಂಧನಕ್ಕೊಳಗಾಗಿ ಮೂರು ತಿಂಗಳಾಗುತ್ತಿದ್ದರೂ ಚಾರ್ಜ್ ಶೀಟ್ ದಾಖಲಿಸಿಲ್ಲ ಎಂಬ ಅಂಶಗಳನ್ನಿಟ್ಟುಕೊಂಡು ಆರೋಪಿ ಪರ ವಕೀಲರು ಜಾಮೀನಿಗೆ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ. ಹಾಗೇನಾದರೂ ನಡೆದರೆ ನ್ಯಾಯಾಲಯದ ನಿಯಮಗಳ ಪ್ರಕಾರ ಆರೋಪಿಗೆ ಜಾಮೀನು ನೀಡುವ ಸಾಧ್ಯತೆ ಇದೆ.
ಈ ಹಿನ್ನೆಲೆಯಲ್ಲಿ ಆರೋಪಿಗೆ ಜಾಮೀನು ಸಿಗದಂತೆ ಮಾಡುವ ಉದ್ದೇಶದಿಂದ ಸಿಟ್ ಅಧಿಕಾರಿಗಳು 300 ಪುಟಗಳ ಮೊದಲ ಹಂತದ ಚಾರ್ಜ್‌ಶೀಟ್ ಸಲ್ಲಿಸಲು ನಿರ್ಧರಿಸಿದ್ದಾರೆ. ಇದಾದ ನಂತರ ಮತ್ತೆ ನವೀನ್ ಕುಮಾರ್‌ನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲು ಸಿಟ್ ತನಿಖಾಧಿಕಾರಿಗಳು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.
ಅಲ್ಲದೆ, ಕಾನೂನಿನ ಪ್ರಕಾರ ಒಂದು ಪ್ರಕರಣದ ಎಫ್‌ಐಆರ್ ದಾಖಲಾದ ನಂತರದ 90 ದಿನಗಳಗೊಳಗೆ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಬೇಕು. ತನಿಖೆ ಮುಗಿದಿಲ್ಲವಾದರೆ, ನ್ಯಾಯಾಲಯದ ಅನುಮತಿ ಪಡೆದು ವಿಸ್ತರಿಸಿಕೊಳ್ಳಲು ಅವಕಾಶ ಇದೆ. ಹೀಗಾಗಿ, ಶೀಘ್ರದಲ್ಲಿಯೇ ಜಾರ್ಜ್‌ಶೀಟ್ ಸಲ್ಲಿಕೆ ಮಾಡಲಿದ್ದಾರೆ ಎನ್ನಲಾಗಿದೆ.







