ಬೆಂಗಳೂರು: ಅಂಚೆ ನೌಕರರ ಬೇಡಿಕೆ ಈಡೇರಿಸಲು ಆಗ್ರಹ
ಬೆಂಗಳೂರು, ಮಾ 28: ಏಳನೆ ವೇತನ ಆಯೋಗದ ವರದಿ ಜಾರಿ ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಈಡೇರಿಸಬೇಕೆಂದು ಗ್ರಾಮೀಣ ಭಾಗದ ಅಂಚೆ ಇಲಾಖೆ ನೌಕರರು ಆಗ್ರಹಿಸಿದ್ದಾರೆ.
ಸೋಮವಾರ ನಗರದ ಕೇಂದ್ರ ಅಂಚೆ ಕಚೇರಿ ಹತ್ತಿರ ಜಮಾಯಿಸಿದ ಅಂಚೆ ನೌಕರರು, ರಾಜಭವನ ಚಲೋ ನಡೆಸಿ, ತಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಅಖಿಲ ಭಾರತ ಗ್ರಾಮೀಣ ಅಂಚೆ ಸೇವಕರ ಸಂಘದ ರಾಜ್ಯ ಕಾರ್ಯದರ್ಶಿ ಕೆ.ಎಸ್.ರುದ್ರೇಶ್, ಈ ಸಂಬಂಧ 2016ರಲ್ಲಿ ಮುಷ್ಕರ ನಡೆಸಿದ ಸಂದರ್ಭದಲ್ಲಿ 7ನೆ ವೇತನ ಆಯೋಗವನ್ನು ಅಂಚೆ ನೌಕರರಿಗೂ ಅನ್ವಯಿಸುವಂತೆ ಜಾರಿಗೊಳಿಸುತ್ತೇವೆ ಎಂದು ಭರವಸೆ ನೀಡಲಾಗಿತ್ತು. ಆದರೆ ಇದುವರೆಗೂ ನಮ್ಮ ಬೇಡಿಕೆ ಈಡೇರಿಸಲು ಕೇಂದ್ರ ಸರಕಾರ ಮುಂದಾಗದಿರುವುದು ಖಂಡನೀಯ ಎಂದರು.
ಕೇಂದ್ರ ಸರಕಾರದ ನೌಕರರಿಗೆ ಈಗಾಗಲೇ 7ನೆ ವೇತನ ಆಯೋಗದ ಪ್ರಕಾರ ಸಂಬಳ ಸೇರಿ ಇತರೆ ಭತ್ತೆ ನೀಡಲಾಗುತ್ತಿದೆ. ಆದರೆ ಅಂಚೆ ನೌಕರರಿಗೆ ಸೌಲಭ್ಯ ಸಿಗುತ್ತಿಲ್ಲ. ಹೀಗಾಗಿ, ಗ್ರಾಮೀಣ ಅಂಚೆ ನೌಕರರಿಗೆ 7ನೇ ವೇತನ ಆಯೋಗದ ವರದಿ ಅನ್ವಯಿಸಬೇಕು ಎಂದು ಹಲವು ಸಮಿತಿಗಳು ಹೇಳಿದ್ದರೂ ಕೇಂದ್ರ ಸರಕಾರ ಇದುವರೆಗೂ ಅನುಷ್ಠಾನಗೊಳಿಸಿಲ್ಲ ಎಂದು ನೌಕರರು ಆಕ್ರೋಶ ವ್ಯಕ್ತಪಡಿಸಿದರು.
7ನೆ ವೇತನ ಆಯೋಗದ ಅನುಷ್ಠಾನಗೊಳ್ಳದ ಕಾರಣ ಸುಮಾರು 2.10ಲಕ್ಷ ಅಂಚೆ ನೌಕರರಿಗೆ ಅನ್ಯಾಯವಾಗುತ್ತಿದೆ. ಇದನ್ನು ಮನಗೊಂಡು ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸಲಾಗುವುದೆಂದು ಎಚ್ಚರಿಕೆ ನೀಡಿದರು.







