‘ರೈತರ ಸಾಲ ಮನ್ನಾ' ವಿಚಾರದಲ್ಲಿ ಮುಖ್ಯಮಂತ್ರಿಗೆ ಒಂದು ವಾರದ ಗಡುವು: ಯಡಿಯೂರಪ್ಪ

ಬೆಂಗಳೂರು, ಮೇ 28: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಒಂದು ವಾರದಲ್ಲಿ ರೈತರ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದಾರೆ. ನಾವು ಒಂದು ವಾರ ಕಾದು ನೋಡುತ್ತೇವೆ. ಆನಂತರ, ನಮ್ಮ ಮುಂದಿನ ಹೋರಾಟದ ರೂಪುರೇಷೆಗಳನ್ನು ಸಿದ್ಧಪಡಿಸುತ್ತೇವೆ ಎಂದು ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಸೋಮವಾರ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಾನು ರಾಜ್ಯದ ಜನರ ಮುಲಾಜಿನಲ್ಲಿ ಇಲ್ಲ, ಕಾಂಗ್ರೆಸ್ ನಾಯಕರ ಮುಲಾಜಿನಲ್ಲಿದ್ದೇನೆ ಎಂದು ಕುಮಾರಸ್ವಾಮಿ ನೀಡಿರುವ ಹೇಳಿಕೆ ಜನತೆಗೆ ಮಾಡಿರುವ ಅಪಮಾನ. ಈ ಹಿಂದೆ ಯಾವ ಮುಖ್ಯಮಂತ್ರಿಯೂ ಇಂತಹ ಹೇಳಿಕೆ ನೀಡಿರಲಿಲ್ಲ ಎಂದರು.
ಕುಮಾರಸ್ವಾಮಿ ಯಾರ ಹಂಗಿನ್ನಲ್ಲಾದರೂ ಇರಲಿ, ರಾಜ್ಯದ ರೈತರ ಸಾಲ ಮನ್ನಾ ಮಾಡಲಿ. ಇಲ್ಲವೇ ರಾಜೀನಾಮೆ ಕೊಟ್ಟು ಮನೆಗೆ ಹೋಗಲಿ. ಕೊಟ್ಟ ಭರವಸೆಯನ್ನು ಹಿಂದಕ್ಕೆ ಪಡೆಯುವ ಪ್ರಯತ್ನವನ್ನು ಮುಖ್ಯಮಂತ್ರಿ ಮಾಡುತ್ತಿದ್ದಾರೆ. ಸಾಂದರ್ಭಿಕ ಶಿಶು, ಸನ್ನಿವೇಶದ ಶಿಶು ಆಗಿರಲಿ, ರಾಜ್ಯದ ರೈತರು ಸಂದರ್ಭ, ಸನ್ನಿವೇಶಕ್ಕೆ ಬಲಿಪಶುವಾಗುವುದನ್ನು ನಾವು ಒಪ್ಪುವುದಿಲ್ಲ. ರೈತರ ಅಪೇಕ್ಷೆಯಂತೆ ನಾವು ಹೋರಾಟಕ್ಕೆ ಸಹಕಾರ ನೀಡುತ್ತೇವೆ ಎಂದು ಅವರು ಹೇಳಿದರು.
ರೈತರ ಸಾಲ ಮನ್ನಾ ಮಾಡುವಂತೆ ಆಗ್ರಹಿಸಿ ಬಿಜೆಪಿ ನಡೆಸಿದ ರಾಜ್ಯಬಂದ್ ಯಶಸ್ವಿಯಾಗಿದೆ. ಪ್ರತಿಭಟನೆ ನಡೆಸುತ್ತಿದ್ದ ಬಿಜೆಪಿ ನಾಯಕರ ವಿರುದ್ಧ ಪೊಲೀಸರನ್ನು ಬಳಸಿಕೊಂಡು ಸರಕಾರ ದಬ್ಬಾಳಿಕೆ ಮಾಡುತ್ತಿದೆ. ಸಂಸದರು, ಶಾಸಕರ ವಿರುದ್ಧ ಪೊಲೀಸರು ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಅವರು ದೂರಿದರು.
ವಾಹನ ತಡೆದು, ಅಂಗಡಿ ಮುಂಗಟ್ಟುಗಳನ್ನು ಬಲವಂತದಿಂದ ಮುಚ್ಚಿಲ್ಲ. ಜನರು ಸ್ವಯಂಪ್ರೇರಿತವಾಗಿ ಬಂದ್ ಮಾಡಬೇಕು ಎಂಬುದು ನಮ್ಮ ಉದ್ದೇಶ. ರೈತರ ಪರವಾಗಿ ಇಂದಿನ ಹೋರಾಟದಲ್ಲಿ ಪಾಲ್ಗೊಂಡಿದ್ದವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ಯಡಿಯೂರಪ್ಪ ಹೇಳಿದರು.
ರಾಜ್ಯ ರಾಜಕೀಯದಲ್ಲಿ ದೊಂಬರಾಟ ಮುಂದುವರೆದಿದೆ. ಯಾರಿಗೆ ಯಾವ ಖಾತೆ ಬೇಕು, ಸಂಪುಟದಲ್ಲಿ ಸಚಿವರು ಯಾರು ಆಗಬೇಕು ಅನ್ನೋ ವಿಚಾರದ ಕಚ್ಚಾಟದಲ್ಲೇ ಮುಖ್ಯಮಂತ್ರಿ ನಿರತವಾಗಿದ್ದಾರೆ. ಇವರಿಂದ ರಾಜ್ಯದ ಅಭಿವೃದ್ಧಿಯಾಗುತ್ತದೆ ಎಂದು ಕಲ್ಪಿಸಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಬಗ್ಗೆ ನಾನು ಈಗ ಏನು ಹೇಳುವುದಿಲ್ಲ. ವಿರೋಧ ಪಕ್ಷದಲ್ಲಿ ಕೂತು ನಾನು ಏನು ಮಾತನಾಡಬೇಕು ಎಂಬುದನ್ನು ಅವರಿಂದ ಪಾಠ ಕಲಿಯಬೇಕಿಲ್ಲ ಎಂದು ಯಡಿಯೂರಪ್ಪ ತಿರುಗೇಟು ನೀಡಿದರು.
ಜನರಿಗೆ ಸತ್ಯಾಂಶವನ್ನು ತಿಳಿಸುವ ಕೆಲಸವನ್ನು ಮಾಡಿದ್ದೇನೆ. ಸತ್ಯಹರಿಶ್ಚಂದ್ರ ಅವರ ಮನೆಯಲ್ಲೆ ಇರುವಂತೆ ಅಪ್ಪ-ಮಕ್ಕಳು ಮಾತನಾಡುತ್ತಾರೆ. ಮೈಸೂರಿನಲ್ಲಿ ನಡೆದಿರುವ ನಿವೇಶನ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಹಂತ ಹಂತವಾಗಿ ಬಿಡುಗಡೆ ಮಾಡುವುದಾಗಿ ಯಡಿಯೂರಪ್ಪ ಎಚ್ಚರಿಕೆ ನೀಡಿದರು.







