ತಂತ್ರಜ್ಞಾನ ಸದ್ಬಳಕೆಗೆ ಕೌಶಲ್ಯ ಸಂವರ್ಧನೆ ಅಗತ್ಯ: ಪ್ರೊ.ಎನ್.ಆರ್.ಶೆಟ್ಟಿ
ಬೆಂಗಳೂರು, ಮೇ 28: ದಿನದಿಂದ ದಿನಕ್ಕೆ ಬೆಳೆಯುತ್ತಿರುವ ತಂತ್ರಜ್ಞಾನವನ್ನು ಸದ್ಬಳಕೆ ಮಾಡಿಕೊಳ್ಳಲು ಕೌಶಲ್ಯವನ್ನು ವೃದ್ಧಿಸಿಕೊಳ್ಳುವುದು ಅತ್ಯಗತ್ಯವಾಗಿದೆ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಆರ್. ಶೆಟ್ಟಿ ತಿಳಿಸಿದರು.
ಸೋಮವಾರ ನಗರದ ನಿಟ್ಟೆ ಮೀನಾಕ್ಷಿ ವಿಶ್ವವಿದ್ಯಾಲಯದಲ್ಲಿ ಕೇಂದ್ರ ಸಕಾರದ ಐಸಿಟಿ ಅಕಾಡೆಮಿ ಸದಸ್ಯತ್ವ ನೋಂದಣಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಾಗತಿಕ ಸವಾಲುಗಳನ್ನು ಎದುರಿಸಲು ತಂತ್ರಜ್ಞಾನ ಅಗತ್ಯ ಇದನ್ನು ಸದ್ಭಳಕೆ ಮಾಡಿಕೊಳ್ಳಲು ಕೌಶಲ್ಯ ವೃದ್ದಿಸಿಕೊಳ್ಳಬೇಕೆಂದು ಅವರು ತಿಳಿಸಿದರು.
ನಗರಗಳ ಜೊತೆಗೆ ಪಟ್ಟಣಗಳಲ್ಲಿರುವ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ವೃತ್ತಿಪರರ ಕೌಶಲ್ಯಾಭಿವೃದ್ಧಿ ಕೇಂದ್ರಗಳನ್ನು ತೆರೆಯಲಾಗಿದ್ದು, ವಿದ್ಯಾರ್ಥಿಗಳಲ್ಲಿ ಕೌಶಲ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹೆಚ್ಚು ಗಮನ ಹರಿಸಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಐಸಿಟಿ ಅಕಾಡೆಮಿ ಸಂಪರ್ಕ ನಿರ್ವಾಹಕ ಡಾ.ಪ್ರವೀಣ್ ಜೈನ್, ಪ್ರಾಂತೀಯ ನಿರ್ವಾಹಕ ಸಿ. ಹರಿ ನಾರಾಯಣ್, ರಕ್ಷಣಾ ವಿಶ್ವವಿದ್ಯಾಲಯ ನಿವೃತ್ತ ಕುಲಪತಿ ಪ್ರೊ.ಎಲ್.ಎಂ. ಪಟ್ನಾಯಕ್, ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಎಚ್.ಸಿ. ನಾಗರಾಜ್, ನಿಟ್ಟೆ ಕೌಶಲ್ಯ ಕೇಂದ್ರದ ಮುಖ್ಯಸ್ಥ ಪ್ರೊ.ಎಂ.ಎನ್. ತಿಪ್ಪೇಸ್ವಾಮಿ ಸೇರಿ ಪ್ರಮುಖರಿದ್ದರು.







