‘ಉಜ್ವಲ’ ಯೋಜನೆಯ ಫಲಾನುಭವಿಗಳ ಜೊತೆ ಮೋದಿ ಮಾತುಕತೆ
ಹಮೀದ್ ನ ಕತೆ ಹೇಳಿದ ಪ್ರಧಾನಿ!

ಹೊಸದಿಲ್ಲಿ, ಮೇ 28: ಕಳೆದ ನಾಲ್ಕು ವರ್ಷಗಳಲ್ಲಿ, ನಾಲ್ಕು ಕೋಟಿ ಬಡಮಹಿಳೆಯರಿಗೆ ಉಚಿತ ಸಂಪರ್ಕ ಸೇರಿದಂತೆ, ಹತ್ತು ಕೋಟಿ ಭಾರತೀಯರು ಎಲ್‌ಪಿಜಿ ಸಂಪರ್ಕ ಪಡೆದುಕೊಂಡಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ತಿಳಿಸಿದ್ದಾರೆ.
ಇದು ಸ್ವಾತಂತ್ರ ನಂತರದ ಆರು ದಶಕಗಳಲ್ಲಿ 13 ಕೋಟಿ ಭಾರತೀಯರು ಪಡೆದುಕೊಂಡಿರುವ ಎಲ್‌ಪಿಜಿ ಸಂಪರ್ಕಕ್ಕಿಂತ ಹಲವು ಪಟ್ಟು ಹೆಚ್ಚಾಗಿದೆ. ಇದಕ್ಕೆ ಕಾರಣ ನಮ್ಮ ಸರಕಾರ ಮಹಿಳೆಯರು ಮತ್ತು ಮಕ್ಕಳು ಅಡುಗೆಯ ಹೊಗೆಯಿಂದ ಮುಕ್ತರಾಗಲು ತೆಗೆದುಕೊಂಡಿರುವ ಕ್ರಮಗಳ ಪರಿಣಾಮವಾಗಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಉಚಿತ ಅನಿಲ ಸಂಪರ್ಕ ಪಡೆದುಕೊಂಡಿದ್ದ ಮಹಿಳೆಯರ ಜೊತೆ ವಿಡಿಯೊ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದ ಪ್ರಧಾನಿ ಮೋದಿ, ಸದ್ಯೋಭವಿಷತ್ತಿನಲ್ಲಿ ಶೇ. 100 ಕುಟುಂಬಗಳಿಗೆ ಸ್ವಚ್ಛ ಇಂಧನವನ್ನು ಪೂರೈಸಲು ಸರಕಾರವು ನಡೆಸುತ್ತಿರುವ ಪ್ರಯತ್ನವನ್ನು ಮತ್ತಷ್ಟು ಹೆಚ್ಚು ಮಾಡಲಿದೆ ಎಂದು ತಿಳಿಸಿದರು. ಈ ವೇಳೆ ತಮ್ಮ ಬಾಲ್ಯದ ದಿನಗಳನ್ನು ಮೆಲುಕು ಹಾಕಿದ ಪ್ರಧಾನಿ, ನನ್ನ ಅಮ್ಮ ಕಟ್ಟಿಗೆ ಅಥವಾ ಬೆರಣಿಯಿಂದ ಒಲೆ ಉರಿಸಲು ಕಷ್ಟಪಡುತ್ತಿದ್ದರು ಎಂದು ತಿಳಿಸಿದ್ದಾರೆ.
2014ರವರೆಗೆ ಕೇವಲ 13 ಕೋಟಿ ಎಲ್‌ಪಿಜಿ ಸಂಪರ್ಕಗಳನ್ನು ನೀಡಲಾಗಿತ್ತು. ಇದು ಬಹುತೇಕವಾಗಿ ಶ್ರೀಮಂತ ಮತ್ತು ಉಳ್ಳವರಿಗಷ್ಟೇ ಸೀಮಿತವಾಗಿತ್ತು. ಕಳೆದ ನಾಲ್ಕು ವರ್ಷಗಳಲ್ಲಿ ನಾವು ಹತ್ತು ಕೋಟಿ ಹೊಸ ಎಲ್‌ಪಿಜಿ ಸಂಪರ್ಕಗಳನ್ನು, ಮುಖ್ಯವಾಗಿ ಬಡವರಿಗೆ, ನೀಡಿದ್ದೇವೆ. ಉಜ್ವಲ ಯೋಜನೆಯು ಬಡವರ, ಸೀಮಿತವರ್ಗದ, ದಲಿತರ, ಬುಡಕಟ್ಟು ಸಮುದಾಯಗಳ ಜೀವನವನ್ನು ಉತ್ತಮಗೊಳಿಸಿದೆ. ಈ ಯೋಜನೆಯು ಸಾಮಾಜಿಕ ಸಬಲೀಕರಣದದಲ್ಲಿ ಪ್ರಮುಖ ಪಾತ್ರವನ್ನು ನಿಬಾಯಿಸುತ್ತಿದೆ ಎಂದು ಪ್ರಧಾನಿ ತಿಳಿಸಿದ್ದಾರೆ.
2016ರಲ್ಲಿ ಜಾರಿಗೆ ತರಲಾದ ಉಜ್ವಲ ಯೋಜನೆಯ ಮೂಲಕ ಮುಂದಿನ ಮೂರು ವರ್ಷಗಳಲ್ಲಿ ಐದು ಕೋಟಿ ಕಡುಬಡ ಕುಟುಂಬದ ಮಹಿಳೆಯರಿಗೆ ಅನಿಲ ಸಂಪರ್ಕವನ್ನು ಒದಗಿಸಲು ಉದ್ದೇಶಿಸಲಾಗಿದೆ. ಆಮೂಲಕ ಮಾಲಿನ್ಯಕಾರಕ ಇಂಧನಗಳಾದ ಕಟ್ಟಿಗೆ, ಬೆರಣಿ ಮುಂತಾದುವುಗಳ ಬಳಕೆಯನ್ನು ಕಡಿಮೆ ಮಾಡಲು ನಿರ್ಧರಿಸಲಾಗಿದೆ ಎಂದು ಮೋದಿ ತಿಳಿಸಿದ್ದಾರೆ. ಎಲ್‌ಪಿಜಿಯು ಒಂದು ಸಂಪೂರ್ಣ ಸ್ವಚ್ಛ ಮತ್ತು ಸುಲಭವಾಗಿ ಸಿಗುವ ಇಂಧನವಾಗಿದ್ದು ಅದರಿಂದ ಮಹಿಳೆಯರು ಆರೋಗ್ಯಕರ ಜೀವನ, ಸಮಯದ ಉಳಿಕೆಯ ಜೊತೆಗೆ ಆರ್ಥಿಕವಾಗಿಯೂ ಸಹಕಾರಿಯಾಗಿದೆ ಮತ್ತು ಪರಿಸರಕ್ಕೂ ಹಾನಿ ಮಾಡುವುದಿಲ್ಲ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.
ಹಮೀದ್ ಕತೆ ಹೇಳಿದ ಮೋದಿ;
ಮಹಿಳೆಯರು ತಮ್ಮ ಮಕ್ಕಳಿಗೆ ಕುರುಕಲು ತಿಂಡಿ ನೀಡದೆ ಪೌಷ್ಠಿಕಾಂಶಯುಕ್ತ ಆಹಾರ ನೀಡಬೇಕೆಂದು ಸಲಹೆ ನೀಡಿದ ಮೋದಿ ಇದೇ ವೇಳೆ ಕತೆಗಾರ ಪ್ರೇಮ್‌ಚಂದ್ ಅವರ ‘ಈದ್ಗಾ’ ಎಂಬ ಕತೆಯನ್ನು ಉಲ್ಲೇಖಿಸಿದರು. ಈ ಕತೆಯು ಹಮೀದ್ ಎಂಬ ಬಾಲಕನದ್ದಾಗಿದೆ. ಅದರಲ್ಲಿ ಆತ ಈದ್ ಹಬ್ಬದಂದು ಸಿಹಿತಿಂಡಿ ಅಥವಾ ಉಡುಗೊರೆಯನ್ನು ಖರೀದಿಸದೆ ತನ್ನ ಅಜ್ಜಿ ಅಡುಗೆ ಮಾಡುವಾಗ ಕೈಸುಡದಿರಲೆಂದು ಚಿಮ್ಟಿಯನ್ನು ಖರೀದಿಸುತ್ತಾನೆ. ಈ ಕತೆಯು ಅತ್ಯಂತ ಭಾವನಾತ್ಮಕವಾಗಿದ್ದು ನಾನೆಂದೂ ಅದನ್ನು ಮರೆಯಲಾರೆ ಎಂದು ಮೋದಿ ತಿಳಿಸಿದ್ದಾರೆ.







