ಆಘಾತ ವ್ಯಕ್ತಪಡಿಸಿದ ಮಾಜಿ ಕೇಂದ್ರ ಸಚಿವ ಪ್ರಫುಲ್ ಪಟೇಲ್
ಇವಿಎಂಗಳು ವಿಫಲವಾಗಲು ಅತ್ಯಧಿಕ ಉಷ್ಣಾಂಶ ಕಾರಣ ಎಂದ ಆಯೋಗ

ವಿದರ್ಭ (ಮಹಾರಾಷ್ಟ್ರ), ಮೇ 28: ಮಹಾರಾಷ್ಟ್ರದ ಭಂಡಾರಾ-ಗೋಂಡಿಯಾ ಲೋಕಸಭಾ ಸ್ಥಾನಕ್ಕಾಗಿ ಸೋಮವಾರ ನಡೆದ ಉಪ ಚುನಾವಣೆಯಲ್ಲಿ ಶೇ. 25 ಮತದಾನ ಯಂತ್ರ ಅಥವಾ ಇವಿಎಂಗಳು ವಿಫಲವಾಗಿವೆ ಎಂದು ಕೇಂದ್ರದ ಮಾಜಿ ಸಚಿವ ಪ್ರಫುಲ್ ಪಟೇಲ್ ಹೇಳಿದ್ದಾರೆ. ವಿಪರೀತ ಉಷ್ಣತೆಯಿಂದ ಮತದಾನ ಯಂತ್ರಗಳು ವಿಫಲವಾಗಿವೆ ಎಂಬ ಪ್ರತಿಪಾದನೆ ನನ್ನಲ್ಲಿ ಅಚ್ಚರಿ ಉಂಟು ಮಾಡಿತ್ತು. ಎಪ್ರಿಲ್‌ನಲ್ಲಿ 45 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಇರುತ್ತದೆ. ಬೇಸಗೆ ಕಾಲದಲ್ಲಿ ಮತದಾನ ನಡೆಸಬಾರದು ಎಂಬುದು ಇದರ ಅರ್ಥವೇ ಎಂದು ಅವರು ಪ್ರಶ್ನಿಸಿದ್ದಾರೆ.
2014ರ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಸೋತಿರುವ ಪ್ರಫುಲ್ ಪಟೇಲ್, ಶೇ. 25 ಇವಿಎಂಗಳು ಕಾರ್ಯ ನಿರ್ವಹಿಸಿಲ್ಲ ಎಂದು ಔಪಚಾರಿಕವಾಗಿ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ ಎಂದಿದ್ದಾರೆ. ಇದೇ ಇವಿಎಂಗಳು ಇತ್ತೀಚೆಗೆ ಗುಜರಾತ್‌ನಲ್ಲಿ ನಡೆದ ಚುನಾವಣೆಯಲ್ಲಿ ಬಳಸಲಾಗಿತ್ತು. ಭಂಡಾರಾ-ಗೋಂಡಿಯಾ ಲೋಕಸಭಾ ಕ್ಷೇತ್ರದ ಹಲವು ಭಾಗಗಳಲ್ಲಿ ಮತದಾನ ಸ್ಥಗಿತಗೊಳಿಸಲಾಗಿತ್ತು ಹಾಗೂ ಅದಕ್ಕೆ ಬದಲಾಗಿ ಬೇರೆ ಇವಿಎಂಗಳನ್ನು ಪೂರೈಕೆ ಮಾಡಿದ ಬಳಿಕ ಮತದಾನ ಮುಂದುವರಿಸಲಾಗಿತ್ತು. ಮತದಾರರ ಆಯ್ಕೆಯನ್ನು ದೃಢೀಕರಿಸುವ ಸ್ಲಿಪ್ ನೀಡುವ ವಿವಿ ಪಾಟ್ ಯಂತ್ರ ಕೂಡ ಕಾರ್ಯ ನಿರ್ವಹಿಸಿಲ್ಲ ಎಂದು ಪ್ರಫುಲ್ ಪಟೇಲ್ ಹೇಳಿದ್ದಾರೆ.







