ತುಮಕೂರು: ಕರ್ನಾಟಕ ಬಂದ್ ಕರೆಗೆ ನೀರಸ ಪ್ರತಿಕ್ರಿಯೆ

ತುಮಕೂರು,ಮೇ.28: ಮುಖ್ಯಮಂತ್ರಿ ಕುಮಾರಸ್ವಾಮಿ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ ಅಧಿಕಾರ ಪಡೆದ 24 ಗಂಟೆಯೊಳಗೆ ರೈತರ ಎಲ್ಲಾ ಸಾಲ ಮನ್ನಾ ಮಾಡದಿರುವುದನ್ನು ವಿರೋಧಿಸಿ, ಬಿಜೆಪಿ ಕರೆ ನೀಡಿದ್ದ ಕರ್ನಾಟಕ ಬಂದ್‍ಗೆ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ರೈತರು, ಸಾರ್ವಜನಿಕರು ಸ್ವಯಂ ಪ್ರೇರಿತವಾಗಿ ಬಂದ್ ನಡೆಸಬೇಕು ಎಂದು ಕರೆ ನೀಡಿದ್ದಕ್ಕೆ ಜಿಲ್ಲೆಯ ಜನರು ಸ್ಪಂದಿಸಿದಂತೆ ಕಂಡುಬರಲಿಲ್ಲ. ಕೆಲ ಹೊತ್ತು ಬಿಜೆಪಿ ಕಾರ್ಯಕರ್ತರು ಪಕ್ಷದ ಬಾವುಟ ಹಿಡಿದು ಎಸ್.ಎಸ್.ಪುರಂ, ಬಿ.ಹೆಚ್.ರಸ್ತೆ, ಎಂ.ಜಿ.ರಸ್ತೆ, ಕೆ.ಆರ್.ಬಡಾವಣೆ ಇನ್ನಿತರ ಕಡೆಗಳಲ್ಲಿ ಅಂಗಡಿ ಮುಂಗಟ್ಟುಗಳನ್ನು ಬಲವಂತವಾಗಿ ಮುಚ್ಚಿಸಲು ಯತ್ನಿಸಿದರಾದರೂ, ಪೊಲೀಸರ ನಿರಂತರ ನಿಗಾದಿಂದ ಬಿಜೆಪಿ ಕಾರ್ಯಕರ್ತರ ಒತ್ತಾಯಕ್ಕೆ ಮಣಿಯದೆ ಎಂದಿನಂತೆ ಅಂಗಡಿ, ಮುಂಗಟ್ಟುಗಳು ಬಾಗಿಲು ತೆರೆದು ವ್ಯಾಪಾರ ವಹಿವಾಟು ನಡೆಸಿದರು. ಸರಕಾರಿ ಮತ್ತು ಖಾಸಗಿ ಬಸ್ ಸಂಚಾರ,ಆಟೋಗಳ ಸಂಚಾರ ಎಂದಿನಂತೆ ಇದ್ದು, ಶಾಲೆಗಳು ಆರಂಭವಾಗಿದ್ದರಿಂದ ಯಾವುದೇ ಅಡೆತಡೆಯಿಲ್ಲದೆ ಶಾಲಾ ಚಟುವಟಿಕೆ ನಡೆದಿದ್ದು, ಕರ್ನಾಟಕ ಬಂದ್ ಸಂಪೂರ್ಣ ವಿಫಲವಾಗಿದೆ ಎಮದು ತಿಳಿದು ಬಂದಿದೆ.
ಬೆಳಗ್ಗೆ 11 ಗಂಟೆ ಸುಮಾರಿಗೆ ನಗರದ ಟೌನ್‍ಹಾಲ್ ವೃತ್ತದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಜಿ.ಬಿ.ಜೋತಿಗಣೇಶ್ ನೇತೃತ್ವದಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಸರಕಾರದ ವಿರುದ್ದ ಘೋಷಣೆ ಕೂಗಿ, ಮೀನಮೇಷ ಎಣಿಸದೆ ಕೂಡಲೇ ರೈತರ ಎಲ್ಲಾ ಸಾಲ ಮನ್ನಾ ಮಾಡುವಂತೆ ಒತ್ತಾಯಿಸಿದರು. ಈ ವೇಳೆ ನಗರದ ಟೌನ್‍ಹಾಲ್ ವೃತ್ತದಲ್ಲಿ ಪ್ರತಿಭಟನಾ ನಿರತರು ರಸ್ತೆ ತಡೆಗೆ ಮುಂದಾದಾಗ ಪೊಲೀಸರು ಬಂಧಿಸಿ, ನಂತರ ಬಿಡುಗಡೆ ಮಾಡಿದರು.





