ಪತಿಯ ವೇತನ ವಿವರವನ್ನು ತಿಳಿಯುವ ಅಧಿಕಾರ ಪತ್ನಿಗಿದೆ: ಹೈಕೋರ್ಟ್

ಜಬಲ್ಪುರ, ಮೇ 28: ಪತ್ನಿಗೆ ತನ್ನ ಪತಿಯ ವೇತನದ ವಿವರ ತಿಳಿಯುವ ಅಧಿಕಾರವಿದೆ ಎಂದು ಮಧ್ಯಪ್ರದೇಶದ ಉಚ್ಚ ನ್ಯಾಯಾಲಯ ತಿಳಿಸಿದೆ. ತನ್ನ ಪ್ರತ್ಯೇಕಿತ ಪತಿ ಸರಕಾರಿ ಅಧೀನದ ಬಿಎಸ್‌ಎನ್‌ಎಲ್ ಸಂಸ್ಥೆಯಲ್ಲಿ ಹಿರಿಯ ಅಧಿಕಾರಿಯಾಗಿ ಉದ್ಯೋಗದಲ್ಲಿದ್ದಾರೆ. ಹಾಗಾಗಿ ನನಗೆ ಹೆಚ್ಚಿನ ನಿರ್ವಹಣಾ ವೆಚ್ಚ ನೀಡಬೇಕೆಂದು ಆಗ್ರಹಿಸಿ ಸುನಿತಾ ಜೈನ್ ಎಂಬ ಮಹಿಳೆ ಸಲ್ಲಿಸಿದ್ದ ಮನವಿಯ ವಿಚಾರಣೆ ನಡೆಸಿದ ನ್ಯಾಯಾಧೀಶ ಎಸ್.ಕೆ ಸೇಠ್ ಹಾಗೂ ನಂದಿತಾ ದುಬೆ ಅವರನ್ನೊಳಗೊಂಡ ಹೈಕೊರ್ಟ್ ಪೀಠ ಈ ಆದೇಶವನ್ನು ನೀಡಿದೆ.
ಮನವಿದಾರರ ಪರ ವಕಾಲತ್ತು ನಡೆಸಿದ ಕೆ.ಸಿ ಗಿಲ್ಡಿಯಲ್, ಸುನಿತಾ ಅವರ ಪತಿ ಪವನ್ ಕುಮಾರ್ ಜೈನ್ ಬಿಎನ್‌ಎನ್‌ಎಲ್‌ನಲ್ಲಿ ಹಿರಿಯ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದು ಉತ್ತಮ ವೇತನವನ್ನು ಪಡೆಯುತ್ತಿದ್ದಾರೆ. ಆದರೆ ಸುನಿತಾಗೆ ಮಾಸಿಕ ಕೇವಲ 7,000 ರೂ. ನಿರ್ವಹಣಾ ವೆಚ್ಚವನ್ನು ನೀಡುತ್ತಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು. ತನ್ನ ಪತಿಯು ಪೇ ಸ್ಲಿಪ್ ಅನ್ನು ನೀಡಬೇಕೆಂಬ ಸುನಿತಾ ಅವರ ಮನವಿಯನ್ನು ವಿಚಾರಣಾ ನ್ಯಾಯಾಲಯವು ತಿರಸ್ಕರಿಸಿದ ನಂತರ ಆಕೆ ಮಾಹಿತಿ ಹಕ್ಕಿನ ಮೂಲಕಪತಿಯ ವೇತನ ವಿವರಣೆಯನ್ನು ಕೋರಿದ್ದರು.
ಈ ಪ್ರಕರಣವು ಕೇಂದ್ರ ಮಾಹಿತಿ ಆಯೋಗದ ಬಳಿ ತಲುಪಿದಾಗ, ಅದು, 2007ರ ಜುಲೈ 27ರಂದು ಪವನ್ ಕುಮಾರ್ ಜೈನ್‌ರ ಮಾಸಿಕ ವೇತನದ ವಿವರವನ್ನು ನೀಡುವಂತೆ ಬಿಎಸ್‌ಎನ್‌ಎಲ್‌ನ ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿಗೆ ಸೂಚಿಸಿತ್ತು. ಆದರೆ ಈ ಆದೇಶದ ವಿರುದ್ಧ ಜೈನ್ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ನ್ಯಾಯಾಲಯವು 2015ರಲ್ಲಿ ಸಿಐಸಿ ಆದೇಶವನ್ನು ಕಾದಿರಿಸಿತ್ತು.





