ಕೃಷಿ ಸಮಸ್ಯೆ ಬಗ್ಗೆ ಚರ್ಚಿಸಲು ಸಂಸತ್‌ನ ವಿಶೇಷ ಅಧಿವೇಶನ ಕರೆಯಲು ರೈತ ನಾಯಕರ ಮನವಿ
ಹೊಸದಿಲ್ಲಿ, ಮೇ 28: ಸದ್ಯ ದೇಶದಲ್ಲಿ ಉಂಟಾಗಿರುವ ರೈತರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಕೂಡಲೇ ಸಂಸತ್‌ನ ವಿಶೇಷ ಅಧಿವೇಶನವನ್ನು ಕರೆಯುವಂತೆ ಅಖಿಲ ಭಾರತ ರೈತ ಸಂಘರ್ಷ ಸಂಯೋಜಕ ಸಮಿತಿ (ಎಐಕೆಎಸ್‌ಸಿಸಿ)ಯ ಮುಖಂಡರು ರಾಷ್ಟ್ರಪತಿಗೆ ಮನವಿ ಮಾಡಿದ್ದಾರೆ.
ರಾಷ್ಟ್ರಪತಿಗಳನ್ನು ಭೇಟಿ ಮಾಡಿದ ಹದಿನೇಳು ಸದಸ್ಯರ ರೈತರ ನಿಯೋಗ, ರೈತರ ಸಾಲ ಮತ್ತು ರೈತರ ಉತ್ಪನ್ನಗಳಿಗೆ ಕನಿಷ್ಟ ಬೆಂಬಲ ಬೆಲೆಯನ್ನು ನೀಡುವ ಬಗ್ಗೆ ಚರ್ಚೆ ನಡೆಸುವಂತೆ ಮನವಿಯನ್ನು ಸಲ್ಲಿಸಿದೆ. ಸದನದಲ್ಲಿ ಅವ್ಯವಸ್ಥೆಯ ಪರಿಣಾಮವಾಗಿ ಅವಿಶ್ವಾಸ ಗೊತ್ತುವಳಿಯನ್ನೂ ಕೈಗೆತ್ತಿಕೊಳ್ಳಲಾಗದ ಪರಿಸ್ಥಿತಿ ಇರುವಾಗ ಕೃಷಿ ಸಂಬಂಧಿತ ಸಮಸ್ಯೆಗಳನ್ನು ಚರ್ಚಿಸಲು ವಿಶೇಷ ಅಧಿವೇಶನವನ್ನು ಕರೆಯುವುದೊಂದೇ ದಾರಿ. ಜಿಎಸ್‌ಟಿಗಾಗಿ ಮಧ್ಯರಾತ್ರಿಯಲ್ಲಿ ವಿಶೇಷ ಅಧಿವೇಶನ ನಡೆಯಲು ಸಾಧ್ಯವಿರುವಾಗ, ಆಹಾರ ಭದ್ರತೆಯನ್ನು ಒದಗಿಸಲು ತಮ್ಮ ಜೀವನವನ್ನೇ ಪುಡಿಪಾಗಿಡುವ ಈ ದೇಶದ ರೈತರ ಸಮಸ್ಯೆಯನ್ನು ಚರ್ಚಿಸಲು ವಿಶೇಷ ಅಧೀವೇಶನ ನಡೆಸಲು ಸಾಧ್ಯವಿಲ್ಲವೇ ಎಂದು ಮನವಿಯಲ್ಲಿ ಪ್ರಶ್ನಿಸಲಾಗಿದೆ.
ತಮ್ಮ ಎರಡು ಬೇಡಿಕೆಗಳು ಒಂದಕ್ಕೊಂದು ಸಂಬಂಧ ಹೊಂದಿವೆ ಎಂದು ತಿಳಿಸಿರುವ ನಿಯೋಗ, ರೈತರಸಾಲ ಮತ್ತು ಕೃಷಿ ಉತ್ಪನ್ನಗಳಿಗೆ ನಿಶ್ಚಿತ ಕನಿಷ್ಟ ಬೆಂಬಲ ಬೆಲೆ, ಈ ಎರಡು ಬೇಡಿಕೆಗಳನ್ನು ರೈತರ ಕಾನೂನಾತ್ಮಕ ಅಧಿಕಾರವನ್ನಾಗಿ ಮಾಡಬೇಕೆಂದು ಮನವಿ ಮಾಡಿದೆ. ರೈತರಿಗೆ ಸಾಲದಿಂದ ಪರಿಹಾರ ಒದಗಿಸದೆ ಕೇವಲ ಕನಿಷ್ಟ ಬೆಂಬಲ ಬೆಲೆಯ ಸಮಸ್ಯೆಯನ್ನು ಮಾತ್ರ ಸರಿಪಡಿಸಿದರೆ, ಸಿಗುವ ಹೆಚ್ಚುವರಿ ಆದಾಯ ಹೆಚ್ಚುತ್ತಿರುವ ಸಾಲವನ್ನು ಮರುಪಾವತಿಸಲು ಹೋಗುತ್ತದೆ. ಇನ್ನು ಕನಿಷ್ಟ ಬೆಂಬಲ ಬೆಲೆಯನ್ನು ನಿಗದಿಪಡಿಸದೆ ಕೇವಲ ಸಾಲವನ್ನು ಮಾತ್ರ ಮನ್ನಾ ಮಾಡಿದರೆ ರೈತರು ಮತ್ತೆ ಸಾಲದ ಸುಳಿಗೆ ಬೀಳುವಂತಾಗುತ್ತದೆ ಎಂದು ಎಐಕೆಎಸ್‌ಸಿಸಿ ನಾಯಕ ಹನ್ನಾನ್ ಮುಲ್ಲಾ ತಿಳಿಸಿದ್ದಾರೆ.
ರೈತರ ವಿಶೇಷ ಅಧಿವೇಶನವನ್ನು ಕರೆಯುವುದು ಇದೇ ಮೊದಲಲ್ಲ ಎಂದು ತಿಳಿಸಿರುವ ರೈತ ನಾಯಕರು, ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯ ಮಂಡೆರ್ವದಲ್ಲಿ ಕಬ್ಬು ಬೆಳೆಗಾರರ ಸಾವಿನ ಹಿನ್ನೆಲೆಯಲ್ಲಿ 2003ರ ಡಿಸೆಂಬರ್‌ನಲ್ಲಿ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು ವಿಶೇಷ ಅಧಿವೇಶನವನ್ನು ಕರೆದು ಕಬ್ಬು ಬೆಳೆಗಾರರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.







