ಉಡುಪಿ ಜಿಲ್ಲೆಯಲ್ಲಿ ಬಂದ್ ಇಲ್ಲ: ಬಿಜೆಪಿ ಕರೆಗೆ ನೀರಸ ಪ್ರತಿಕ್ರಿಯೆ

ಉಡುಪಿ, ಮೇ 28: ರೈತರ ಸಾಲಮನ್ನಾಕ್ಕೆ ಸಂಬಂಧಿಸಿ ಬಿಜೆಪಿ ಇಂದು ಕರೆ ನೀಡಿರುವ ರಾಜ್ಯ ಬಂದ್‌ಗೆ ಉಡುಪಿ ಜಿಲ್ಲೆಯಾದ್ಯಂತ ಯಾವುದೇ ಬೆಂಬಲ ವ್ಯಕ್ತವಾಗಿಲ್ಲ. ಜಿಲ್ಲೆಯ ಐದು ಕ್ಷೇತ್ರಗಳಲ್ಲಿಯೂ ಬಿಜೆಪಿ ಶಾಸಕರೇ ಇದ್ದರೂ ಬಂದ್‌ಗೆ ಮಾತ್ರ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಖಾಸಗಿ ಸರ್ವಿಸ್, ಸಿಟಿ ಬಸ್, ಅಟೋರಿಕ್ಷಾ, ಟ್ಯಾಕ್ಸಿ ಸಂಘಗಳು ಬಂದ್‌ಗೆ ಬೆಂಬಲ ನೀಡದ ಕಾರಣ ಬೆಳಗ್ಗೆಯಿಂದಲೇ ಅವುಗಳು ರಸ್ತೆಗೆ ಇಳಿದಿದ್ದವು. ಆದುದರಿಂದ ನಗರದಲ್ಲಿ ಜನ ಸಂಚಾರ ಎಂದಿನಂತೆ ಕಂಡುಬಂದವು. ಜಿಲ್ಲೆಯ ಪೆಟ್ರೋಲ್ ಬಂಕ್‌ಗಳು, ಸಿನೆಮಾ ಥಿಯೇಟರ್‌ಗಳು, ಅಂಗಡಿ ಮುಗ್ಗಟ್ಟು ಗಳಿಗೆ ಬಂದ್‌ನ ಯಾವುದೇ ಬಿಸಿ ಮುಟ್ಟಿಲ್ಲ. ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಸಾಮಾನ್ಯವಾಗಿತ್ತು.
ಕುಂದಾಪುರ, ಬೈಂದೂರು, ಪಡುಬಿದ್ರೆ, ಕಾಪು, ಬ್ರಹ್ಮಾವರ, ಕಾರ್ಕಳ ಪೇಟೆ ಗಳಲ್ಲಿ ಎಂದಿನಂತೆ ಜನಜೀವನ ಸಾಗಿತ್ತು. ವಂಡ್ಸೆ ಮತ್ತು ಚಿತ್ತೂರು ಗ್ರಾಮದಲ್ಲಿ ಅಂಗಡಿ ಮಾಲಕರು ಕೆಲ ಕಾಲ ಅಂಗಡಿಗಳನ್ನು ಮುಚ್ಚಿರುವುದು ಕಂಡು ಬಂತು. ಶಾಲಾ ಆರಂಭಕ್ಕೆ ಯಾವುದೇ ತೊಡಕಾಗಿಲ್ಲ. ಜಿಲ್ಲಾಧಿಕಾರಿ ಕಚೇರಿ, ತಾಲೂಕು ಕಚೇರಿ, ನ್ಯಾಯಾಲಯ ಸೇರಿದಂತೆ ಎಲ್ಲ ಸರಕಾರಿ ಕಚೇರಿಗಳು ತೆರೆದಿದ್ದವು. ನಿನ್ನೆ ರಾತ್ರಿ ಮತ್ತು ಇಂದು ಬೆಳಗ್ಗೆಯಿಂದ ಸುರಿದ ಭಾರೀ ಮಳೆಯಿಂದಾಗಿ ಕೆಲವು ಕಡೆ ಜನ ಸಂಚಾರ ವಿರಳವಾಗಿತ್ತು.
ಉಡುಪಿ ನಗರದಲ್ಲಿ ಜಿಲ್ಲಾ ಬಿಜೆಪಿ ಪ್ರತಿಭಟನಾ ಮೆರವಣಿಗೆ ನಡೆಸಿದರೆ, ಕಾಪು, ಕುಂದಾಪುರದಲ್ಲಿ ಮನವಿ ಸಲ್ಲಿಸಲಾಗಿದೆ. ಕುಂದಾಪುರ ತಾಲೂಕು ರೈತ ಸಂಘ ಬೈಂದೂರಿನಲ್ಲಿ ಸಾಲಮನ್ನಾ ಮಾಡುವಂತೆ ಆಗ್ರಹಿಸಿ ಪಾದಯಾತ್ರೆಯ ಮೂಲಕ ತೆರಳಿ ವಿಶೇಷ ತಹಶೀಲ್ದಾರ್ ಕಚೇರಿಯಲ್ಲಿ ಮನವಿ ಸಲ್ಲಿಸಿತು. ಉಳಿದಂತೆ ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದ ಬಗ್ಗೆ ವರದಿ ಯಾಗಿಲ್ಲ. ಬಂದ್ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಬಿಗಿ ಪೊಲೀಸ್ ಬಂದೋ ಬಸ್ತ್ ಒದಗಿಸಲಾಗಿತ್ತು.
ಉಡುಪಿ ಜಿಲ್ಲೆಯ ಕೆಲವು ಕಡೆಗಳಲ್ಲಿ ಪ್ರತಿಭಟನೆ ನಡೆಸಿ ಮನವಿ ನೀಡ ಲಾಗಿದೆ. ಅದು ಬಿಟ್ಟು ಯಾವುದೇ ಬಂದ್ ಆಚರಣೆ ನಡೆದಿಲ್ಲ. ಅದೇ ರೀತಿ ಎಲ್ಲೂ ಕೂಡ ಬಂದ್ ಮಾಡುವಂತೆ ಯಾರು ಒತ್ತಾಯ ಮಾಡಿಲ್ಲ. ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಭದ್ರತೆ ಒದಗಿಸ ಲಾಗಿತ್ತು. ಜಿಲ್ಲೆಯಾದ್ಯಂತ ಮೂರು ಕೆಎಸ್‌ಆರ್‌ಪಿ, ಆರು ಡಿಎಆರ್ ತುಕಡಿ ಯನ್ನು ನಿಯೋಜಿಸಲಾಗಿತ್ತು. ಉಳಿದಂತೆ ಆಯಾ ಠಾಣಾ ವ್ಯಾಪ್ತಿಯ ಪೊಲೀಸ್ ಸಿಬ್ಬಂದಿಗಳು ಭಧ್ರತೆಯನ್ನು ಒದಗಿಸಿದ್ದರು.
-ಲಕ್ಷ್ಮಣ್ ಬ.ನಿಂಬರಗಿ, ಪೊಲೀಸ್ ಅಧೀಕ್ಷಕರು, ಉಡುಪಿ ಜಿಲ್ಲೆ.







