ದ.ಕ.ಜಿಲ್ಲೆ ಪುನರಾರಂಭಗೊಂಡ ಶಾಲೆಗಳಲ್ಲಿ ವಿದ್ಯಾರ್ಥಿಗಳ ಕಲರವ

ಮಂಗಳೂರು, ಮೇ 28: ಪ್ರಸಕ್ತ ಸಾಲಿನ ಶೈಕ್ಷಣಿಕ (2018-19) ವರ್ಷದ ಪುನರಾರಂಭವು ಸೋಮವಾರ ಆಗಿದ್ದು, ದ.ಕ.ಜಿಲ್ಲೆಯ ಕೆಲವು ಶಾಲೆಗಳಲ್ಲಿ ವಿದ್ಯಾರ್ಥಿಗಳ ಕಲರವ ಕಂಡು ಬಂತು. ವಿದ್ಯಾರ್ಥಿಗಳು ಉತ್ಸಾಹದಿಂದಲೇ ಶಾಲೆಯ ಮೆಟ್ಟಲೇರಿದರು. ಹೊಸತಾಗಿ ಸೇರ್ಪಡೆಗೊಂಡ ಮಕ್ಕಳು ಒಂದಷ್ಟು ಅಳುಕುತ್ತಲೇ ಶಾಲಾವರಣ ಪ್ರವೇಶಿಸುತ್ತಿರುವುದು ಮತ್ತು ಹೆತ್ತವರು ಆ ಮಕ್ಕಳನ್ನು ಸಮಾಧಾನಪಡಿಸುತ್ತಿರುವುದು ಕಂಡು ಬಂತು.
ಇನ್ನು ಬಹುತೇಕ ಶಾಲೆಗಳಲ್ಲಿ ಮೇ 29ರಂದು ಪ್ರಾರಂಭೋತ್ಸವ ನಡೆಯಲಿದೆ. ಸೋಮವಾರಕ್ಕೆ ಮುನ್ನವೇ ಶಾಲೆಗಳ ಕೊಠಡಿ, ಶೌಚಾಲಯವನ್ನು ಶುಚಿಗೊಳಿಸಲು ಸೂಚಿಸಲಾಗಿತ್ತು. ಅದರಂತೆ ಕೆಲವು ಶಾಲೆಗಳ ಶಿಕ್ಷಕರು ಎಸ್‌ಡಿಎಂಸಿ ಸದಸ್ಯರು, ಹೆತ್ತವರು, ಪೋಷಕರ ಸಹಕಾರದಿಂದ ಆ ಕಾರ್ಯ ಮುಗಿಸಿದ್ದರೆ, ಇನ್ನು ಕೆಲವು ಶಿಕ್ಷಕರು ಸೋಮವಾರ ಶಾಲೆಯ ಬಾಗಿಲು ತೆರೆದು ಶುಚಿತ್ವಕ್ಕೆ ಆದ್ಯತೆ ನೀಡಿದರು. ಸೋಮವಾರ ಕೆಲವು ಕಡೆ ಆರಂಭೋತ್ಸವ ನಡೆದರೆ, ಹೆಚ್ಚಿನ ಶಾಲೆಗಳಲ್ಲಿ ಮಂಗಳವಾರ ಹಬ್ಬದ ವಾತಾವರಣ ಕಂಡು ಬರಲಿದೆ.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಿವರಾಮಯ್ಯ ಮಾತನಾಡಿ ‘ಶೈಕ್ಷಣಿಕ ವರ್ಷಕ್ಕೆ ಇಲಾಖೆಯು ಸರ್ವ ರೀತಿಯಲ್ಲೂ ಸಜ್ಜಾಗಿದೆ. ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆ ಎದುರಾಗದಂತೆ ಕ್ರಮ ಕೈಗೊಳ್ಳಲಾಗುವುದು. ಇಂದು (ಸೋಮವಾರ) ಕೆಲವು ಶಾಲೆಗಳು ಪುನರಾರಂಭಗೊಂಡರೆ, ನಾಳೆ (ಮಂಗಳವಾರ) ಎಲ್ಲಾ ಶಾಲೆಗಳೂ ತೆರೆಯಲ್ಪಡಲಿವೆ. ಶಾಲೆಗಳಲ್ಲದೆ, ವಲಯ ಮಟ್ಟದಲ್ಲೂ ಪ್ರಾರಂಭೋತ್ಸವ ನಡೆಯಲಿದೆ. ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ವಿತರಣೆಯೂ ಮಾಡಲಾಗುವುದು. ಇನ್ನೊಂದೆರಡು ದಿನದಲ್ಲಿ ಮಕ್ಕಳ ಸಮವಸ್ತ್ರ ಕೈ ಸೇರಲಿದ್ದು, ಆ ಬಳಿಕ ವಿದ್ಯಾರ್ಥಿಗಳಿಗೆ ಅವುಗಳನ್ನು ಹಂಚಲಾಗುವುದು’ ಎಂದು ಹೇಳಿದ್ದಾರೆ.







