ಎಲ್ಲ ಕೇಂದ್ರ ಸರಕಾರಿ ಇಲಾಖಾ ಕ್ಯಾಂಟೀನ್‌ಗಳಲ್ಲಿ ಆಹಾರ ಸುರಕ್ಷತಾ ಮೇಲ್ವಿಚಾರಕರ ನೇಮಕ

ಹೊಸದಿಲ್ಲಿ,ಮೇ 28: ತನ್ನ ಎಲ್ಲ ಇಲಾಖಾ ಕ್ಯಾಂಟೀನ್‌ಗಳಲ್ಲಿ ಆಹಾರ ಸುರಕ್ಷತಾ ಮೇಲ್ವಿಚಾರಕರನ್ನು ನೇಮಕಗೊಳಿಸಲು ಕೇಂದ್ರ ಸರಕಾರವು ನಿರ್ಧರಿಸಿದೆ.
ಮಾನವ ಬಳಕೆಗೆ ಸುರಕ್ಷಿತ ಮತ್ತು ಪರಿಪೂರ್ಣ ಆಹಾರದ ಲಭ್ಯತೆಯನ್ನು ಖಚಿತಪಡಿಸುವ ಹೊಣೆಗಾರಿಕೆಯನ್ನು ಹೊಂದಿರುವ ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನಕ ಪ್ರಾಧಿಕಾರ(ಎಫ್‌ಎಸ್‌ಎಸ್‌ಎಐ)ವು ಈ ಮೇಲ್ವಿಚಾರಕರನ್ನು ತರಬೇತುಗೊಳಿಸಲಿದೆ. ಅವರು 25 ಆಹಾರ ನಿರ್ವಾಹಕರ ಮೇಲೂ ನಿಗಾ ಇರಿಸಲಿದ್ದಾರೆ ಎಂದು ಅಧಿಕೃತ ಹೇಳಿಕೆಯು ತಿಳಿಸಿದೆ.
ಎಫ್‌ಎಸ್‌ಎಸ್‌ಎಐ ನಿಯಮಾವಳಿಗಳಂತೆ ಎಲ್ಲ ಇಲಾಖಾ ಕ್ಯಾಂಟೀನ್‌ಗಳು ಪರವಾನಿಗೆಯನ್ನು ಮತ್ತು ತರಬೇತಾದ ಆಹಾರ ಸುರಕ್ಷತಾ ಮೇಲ್ವಿಚಾರಕರನ್ನು ಹೊಂದಿರುವುದು ಕಡ್ಡಾಯವಾಗಿದೆ. ಇಂತಹ ಮೇಲ್ವಿಚಾರಕರಿಗೆ ತರಬೇತಿಯು 2018,ಡಿ.31ರೊಳಗೆ ಪೂರ್ಣಗೊಳ್ಳಬೇಕಿದೆ ಎಂದು ಸಿಬ್ಬಂದಿ ಸಚಿವಾಲಯವು ಎಲ್ಲ ಕೇಂದ್ರ ಸರಕಾರಿ ಕಚೇರಿಗಳಿಗೆ ನೀಡಿರುವ ಆದೇಶದಲ್ಲಿ ತಿಳಿಸಲಾಗಿದೆ.
ಜೂ.16ರಿಂದ ಆರಂಭಗೊಳ್ಳಲಿರುವ ಮೊದಲ ತರಬೇತಿ ಕಾರ್ಯಾಗಾರಕ್ಕೆ ತಮ್ಮ ಅಧಿಕಾರಿಗಳನ್ನು ಹೆಸರಿಸುವಂತೆಯೂ ಎಲ್ಲ ಕೇಂದ್ರ ಸರಕಾರಿ ಸಂಸ್ಥೆಗಳಿಗೆ ಸೂಚಿಸಲಾಗಿದೆ. ಕೇಂದ್ರ ಸರಕಾರದ ವಿವಿಧ ಸಂಸ್ಥೆಗಳಲ್ಲಿ ಒಟ್ಟು 1,352 ನೋಂದಾಯಿತ ಕ್ಯಾಂಟೀನ್‌ಗಳು ಮತ್ತು ಟಿಫಿನ್ ರೂಮ್‌ಗಳು ಕಾರ್ಯಾಚರಿಸುತ್ತಿವೆ.





