ನಲಪಾಡ್ ಜಾಮೀನು ಅರ್ಜಿ ವಿಚಾರಣೆ ಮಂಗಳವಾರಕ್ಕೆ ಮುಂದೂಡಿಕೆ
ವಿದ್ವತ್ ಮೇಲಿನ ಹಲ್ಲೆ ಪ್ರಕರಣ

ಬೆಂಗಳೂರು, ಮೇ 28: ವಿದ್ವತ್ ಕೊಲೆ ಯತ್ನ ಪ್ರಕರಣದಲ್ಲಿ ಆರೋಪಿಯಾಗಿ ಜೈಲು ಸೇರಿರುವ ನಲಪಾಡ್ ಹಾರಿಸ್‌ಗೆ ಸೋಮವಾರ ಕೂಡ ಜಾಮೀನು ಸಿಕ್ಕಿಲ್ಲ.
ಪ್ರಕರಣದ ವಿಚಾರಣೆ ನಡೆಸಿದ ನಗರದ ಸೆಷನ್ಸ್ ಕೋರ್ಟ್ ಅರ್ಜಿ ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿತು.
ನಲಪಾಡ್ ಪರ ವಾದಿಸಿದ ವಕೀಲ ಉಸ್ಮಾನ್ ಅವರು, ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿರುವ ಪೊಲೀಸರು ಈಗಾಗಲೇ ಚಾರ್ಜ್‌ಶೀಟ್ ದಾಖಲಿಸಿದ್ದಾರೆ. ಈ ಮೊದಲು ಸಾಕ್ಷ ನಾಶದ ಕಾರಣ ಮುಂದಿಟ್ಟುಕೊಂಡು ಜಾಮೀನು ನೀಡಿರಲಿಲ್ಲ. ಈಗ ತನಿಖೆ ಮುಗಿದಿರುವುದರಿಂದ ಜಾಮೀನು ನೀಡಬೇಕೆಂದು ಪೀಠಕ್ಕೆ ಮನವಿ ಮಾಡಿದರು.
ಈಗಾಗಲೇ ನಲಪಾಡ್ ಸಲ್ಲಿಸಿರುವ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಿರುವ ವಿದ್ವತ್ ಪರ ವಕೀಲ ಶ್ಯಾಂ ಸುಂದರ್, ತಮಗೆ ವಾದ ಮಾಡಲು ಕಾಲಾವಕಾಶ ನೀಡುವಂತೆ ಮನವಿ ಮಾಡಿದ್ದರಿಂದ ಜಾಮೀನು ಅರ್ಜಿಯ ವಿಚಾರಣೆಯನ್ನು ನ್ಯಾಯಪೀಠವು ಮಂಗಳವಾರಕ್ಕೆ ಮುಂದೂಡಿತು.
ಸಾಕ್ಷಿಗಳ ಮೇಲೆ ನಲಪಾಡ್ ಹಾರಿಸ್ ಒತ್ತಡ ಹೇರುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಆರೋಪಿಗೆ ಜಾಮೀನು ನೀಡಬಾರದು ಅನ್ನೋದು ವಿದ್ವತ್ ಪರ ವಕೀಲ ಶ್ಯಾಂ ಸುಂದರ್ ವಾದ.





