ಯುಪಿಎಸ್ಸಿ ಅಭ್ಯರ್ಥಿ ಆಯ್ಕೆ ಪದ್ಧತಿ ಬದಲಾವಣೆಯ ಕೇಂದ್ರ ಸರಕಾರದ ನಡೆ ಬಹುತ್ವ, ಪ್ರಜಾಸತ್ಮಾತ್ಮಕ ಮೌಲ್ಯಗಳಿಗೆ ಬೆದರಿಕೆ
ಹೊಸದಿಲ್ಲಿ, ಮೇ 28: ಪ್ರಸಕ್ತ ಯುಪಿಎಸ್ಸಿ ಅಭ್ಯರ್ಥಿಗಳ ಆಯ್ಕೆ ಪದ್ಧತಿಯ ಬದಲಾವಣೆ ಮತ್ತು ಇದನ್ನು ಫೌಂಡೇಶನ್ ಕೋರ್ಸ್‌ನ ಪ್ರದರ್ಶನದ ಆಧಾರದ ಮೇಲೆ ನಡೆಸುವ ಕೇಂದ್ರ ಸರಕಾರದ ಪ್ರಸ್ತಾವನೆಯನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿಎಫ್‌ಐ) ಚೆಯರ್‌ಮೆನ್ ಇ.ಅಬೂಬಕರ್ ಖಂಡಿಸಿದ್ದಾರೆ.
ಸಂಬಂಧಿತ ವಿಭಾಗಗಳಿಗೆ ಪತ್ರವೊಂದನ್ನು ಕಳುಹಿಸಿರುವ ಸಿಬ್ಬಂದಿ ಮತ್ತು ತರಬೇತಿ ಇಲಾಖೆ, ಯುಪಿಎಸ್ಸಿ ನಾಗರಿಕ ಪರೀಕ್ಷೆಯಲ್ಲಿ ತೇರ್ಗಡೆಯಾದ ಕೂಡಲೇ ಅಭ್ಯರ್ಥಿ ಆಯ್ಕೆಯ ಪ್ರಸಕ್ತ ಪದ್ಧತಿಯ ಬದಲಾಗಿ ಫೌಂಡೇಶನ್ ಕೋರ್ಸ್‌ನ ಪ್ರದರ್ಶನದ ಆಧಾರದ ಮೇಲೆ ಆಯ್ಕೆಯ ಸಾಧ್ಯತೆಯನ್ನು ಪರೀಕ್ಷಿಸಲು ಹೇಳಿದೆ.
ಯುಪಿಎಸ್ಸಿ ನಾಗರಿಕ ಸೇವಾ ಪರೀಕ್ಷೆಯ ಮೂರು ಹಂತಗಳಾದ ಪ್ರಾಥಮಿಕ, ಮುಖ್ಯ ಮತ್ತು ಸಂದರ್ಶನವನ್ನು ಸಂಪೂರ್ಣಗೊಳಿಸಿದ ಅಭ್ಯರ್ಥಿಯು ಮಸ್ಸೂರಿಯಲ್ಲಿರುವ ಲಾಲ್ ಬಹದ್ದೂರ್ ಶಾಸ್ತ್ರಿ ನ್ಯಾಷನಲ್ ಅಕಾಡಮಿ ಆಫ್ ಅಡ್ಮಿನಿಸ್ಟ್ರೇಷನ್ (ಎಲ್‌ಬಿಎಸ್‌ಎಲ್‌ಎಎ)ಗೆ 15 ವಾರಗಳ ದೀರ್ಘವಾದ ಫೌಂಡೇಷನ್ ಕೋರ್ಸ್‌ಗೆ ಹೋಗಬೇಕಾಗಿದೆ. ಪ್ರಸಕ್ತ ಲಿಖಿತ ಪರೀಕ್ಷೆ ಮತ್ತು ಸಂದರ್ಶದಲ್ಲಿ ದೊರಕಿದ ಅಂಕಗಳ ಆಧಾರದಲ್ಲಿ ಯುಪಿಎಸ್ಸಿ ಮೂಲಕ ಐಎಎಸ್, ಐಪಿಎಸ್, ಐಎಫ್‌ಎಸ್‌ನಂತರ ಸೇವೆಗಳು ಮತ್ತು ಇತರ ಕೇಂದ್ರೀಯ ಸೇವೆಗಳಿಗೆ ಫೌಂಡೇಶನ್ ಕೋರ್ಸ್‌ಗೂ ಮೊದಲು ಆಯ್ಕೆಯನ್ನು ನಡೆಸಲಾಗುತ್ತದೆ. ಪ್ರಸಕ್ತವಿರುವ ಪದ್ಧತಿಯು ಅದರ ಪ್ರಾರಂಭದಿಂದಲೇ ಪಾರದರ್ಶಕ ಮತ್ತು ವಿಶ್ವಾಸಾರ್ಹ ಎಂದು ಸಾಬೀತಾಗಿದೆ. ಮೋದಿ ಸರಕಾರದಡಿಯಲ್ಲಿ ಹಲವಾರು ಸಂಸ್ಥೆಗಳು ತಮ್ಮ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತಿರುವಾಗ, ಪ್ರಾಮಾಣಿಕತೆ ಮತ್ತು ನಿಷ್ಪಕ್ಷಪಾತತೆಯಲ್ಲಿ ಯಾವತ್ತೂ ಸಂದೇಹ ಉದ್ಭವಿಸದ ಸಂಸ್ಥೆಗಳಲ್ಲಿ ಯುಪಿಎಸ್ಸಿ ಒಂದಾಗಿದೆ. ಒಂದು ವೇಳೆ ಸೇವೆಗಳಿಗೆ ಫೌಂಡೇಶನ್ ಕೋರ್ಸ್‌ನ ಬಳಿಕ ನೇಮಕಾತಿ ನಡೆದರೆ, ಯುಪಿಎಸ್ಸಿ ಪರೀಕ್ಷೆಯು ಕೇವಲ ಅರ್ಹತಾ ಪರೀಕ್ಷೆಗಷ್ಟೇ ಸೀಮಿತವಾಗಲಿದೆ. ಕೇಂದ್ರೀಯ ಸೇವೆಗಳಿಗೆ ಪರೀಕ್ಷೆ ನಡೆಸಲು ಸಂಧಾನದ ಪರಿಚ್ಛೇದ 320 ಯುಪಿಎಸ್ಸಿಗೆ ಸ್ಪಷ್ಟವಾಗಿ ಅಧಿಕಾರವನ್ನು ನೀಡಿದೆ. ಅಭ್ಯರ್ಥಿ ಆಯ್ಕೆಯು ಪರೀಕ್ಷೆಯ ನಂತರದ ತಾರ್ಕಿಕ ಮತ್ತು ಅಗತ್ಯ ಭಾಗವಾಗಿದೆ. ಈ ರೀತಿಯ ಪ್ರತಿಷ್ಠಿತ ಸಂಸ್ಥೆಗಳ ಪಾತ್ರವನ್ನು ದುರ್ಬಲಗೊಳಿಸುವ ಯಾವುದೇ ಪ್ರಯತ್ನಗಳನ್ನು ಪ್ರತಿರೋಧಿಸಬೇಕಾಗಿದೆ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಪ್ರಸ್ತಾವಿತ ಬದಲಾವಣೆಯು ಭ್ರಷ್ಟಾಚಾರ, ದುರಾಚಾರ ಮತ್ತು ಪಕ್ಷಪಾತವನ್ನು ಪ್ರೋತ್ಸಾಹಿಸಲಿದೆ. ಆಯ್ಕೆಯಲ್ಲಿ ಪ್ರಭಾವ ಬೀರಲು ರಾಜಕಾರಣಿಗಳು ಮತ್ತು ಅಧಿಕಾರಿಗಳಿಗೆ ಅವಕಾಶ ನೀಡಲಿದೆ. ಇದರ ಪರಿಣಾಮವಾಗಿ ಕಾಲಾಂತರದಲ್ಲಿ ಸಾರ್ವಜನಿಕ ಆಡಳಿತದ ಗುಣಮಟ್ಟವು ಕಡಿಮೆಯಾಗಲಿದೆ. ಭಾರತವು ನೈಜ ಪ್ರಜಾಸತ್ತಾತ್ಮಕ ದೇಶವಾಗಿರುವ ನಿಟ್ಟಿನಲ್ಲಿ ಸಾರ್ವಜನಿಕ ಆಡಳಿತದಲ್ಲಿ ರಾಜಕೀಯ ಹಸ್ತಕ್ಷೇಪದಿಂದ ರಕ್ಷಿಸಬೇಕಾಗಿರುವುದು ಅತ್ಯಗತ್ಯವಾಗಿದೆ. ಜೊತೆಗೆ ಇದರ ಕಾರಣದಿಂದಾಗಿ ಜಾತಿ, ಸಮುದಾಯ, ಧರ್ಮ ಮತ್ತು ಪ್ರಾದೇಶಿಕ ಆಧಾರದಲ್ಲಿ ಭೇದಭಾವ ಮತ್ತು ಪಕ್ಷಪಾತದ ಹಾದಿಯೂ ತೆರೆದುಕೊಳ್ಳಬಹುದು. ಇದು ದೇಶದ ಬಹುತ್ವಕ್ಕೆ ಬೆದರಿಕೆಯಾಗಿದೆ. ಇದರಿಂದ ಬಹುಸಂಖ್ಯಾಕವಾದಕ್ಕೂ ಒಲವು ದೊರಕಬಹುದು ಎಂದು ಇ.ಅಬೂಬಕರ್ ತಿಳಿಸಿದ್ದಾರೆ. ಸರಕಾರದ ಈ ಅಪ್ರಜಾಸತ್ತಾತ್ಮಕ ನಡೆಯ ವಿರುದ್ಧ ಪ್ರಜಾಪ್ರಭುತ್ವಪ್ರೇಮಿಗಳೆಲ್ಲರೂ ಧ್ವನಿ ಎತ್ತಬೇಕು ಎಂದು ಅವರು ಕರೆ ನೀಡಿದ್ದಾರೆ.







