ಸಾಲ ಮನ್ನಾ ವಿಚಾರದಲ್ಲಿ ಕುಮಾರಸ್ವಾಮಿ ಯೂ ಟರ್ನ್: ಸಿ.ಟಿ.ರವಿ ಆರೋಪ

ಚಿಕ್ಕಮಗಳೂರು, ಮೇ 28: ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದಲ್ಲಿ 24 ಗಂಟೆಗಳಲ್ಲಿ ರಾಜ್ಯದ ಎಲ್ಲ ರೈತರ ಸಂಪೂರ್ಣ ಸಾಲ ಮನ್ನಾ ಮಾಡುವುದಾಗಿ ಚುನಾವಣೆಗೂ ಮುನ್ನ ಬಿಡುಗಡೆ ಮಾಡಿ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದು, ಅಧಿಕಾರಕ್ಕೆ ಬಂದು ನಾಲ್ಕು ದಿನ ಕಳೆದರೂ ಸಿಎಂ ಕುಮಾರಸ್ವಾಮಿ ಸಾಲ ಮನ್ನಾ ಘೋಷಣೆ ಮಾಡದೇ ಯು ಟರ್ನ್ ಹೊಡೆದಿದ್ದಾರೆ. ಸಿಎಂ ಕೊಟ್ಟ ಮಾತನ್ನ ಉಳಿಸಿಕೊಳ್ಳದೇ ವಚನ ಭ್ರಷ್ಟರಾಗಿದ್ದಾರೆಂದು ಶಾಸಕ ಸಿ.ಟಿ.ರವಿ ಆರೋಪಿಸಿದ್ದಾರೆ.
ರೈತರ ಸಂಪೂರ್ಣ ಸಾಲ ಮನ್ನಾ ಮಾಡುವಂತೆ ಒತ್ತಾಯಿಸಿ ಸೋಮವಾರ ರಾಜ್ಯ ಬಂದ್‍ಗೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಸಿಟಿ ರವಿ ನೇತೃತ್ವದಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ಸೋಮವಾರ ಬೆಳಗ್ಗೆ ನಗರದಲ್ಲಿ ಹಮ್ಮಿಕೊಳ್ಳಲಾದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಚುನಾವಣೆ ಸಂದರ್ಭದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜನತೆಗೆ ಕೊಟ್ಟ ಮಾತಿನಂತೆ ರೈತರ ಸಂಪೂರ್ಣ ಸಾಲಮನ್ನಾ ಮಾಡಿ, ರೈತರಿಗೆ ನೆರವಿಗೆ ಬರಬೇಕು. ಕುಮಾರಸ್ವಾಮಿ ಅವರು ಚುನಾವಣೆ ಸಂದರ್ಭದಲ್ಲಿ ಒಂದು ಮಾತು, ಅಧಿಕಾರಕ್ಕೆ ಬಂದ ಮೇಲೆ ಒಂದು ಮಾತು ಆಡುತ್ತಿದ್ದಾರೆ. ಜನನಾಯಕರಾದವರು ಎರಡು ನಾಲಿಗೆಯವರಂತೆ ಮಾತನಾಡಬಾರದು. ರಾಜ್ಯದಲ್ಲಿ ಇದುವರೆಗೂ 3,800ಕ್ಕೂ ಹೆಚ್ಚು ರೈತರು ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಸಾಲ ಮನ್ನಾ ಮಾಡಿ ಅವರ ಋಣ ತೀರಿಸಿ ಎಂದು ಹೇಳಿದರು.
ಎಚ್.ಡಿ.ಕುಮಾರಸ್ವಾಮಿ ಅವರು ಸದ್ಯ ರಾಜ್ಯದ ಮುಖ್ಯಮಂತ್ರಿ ಆಗಿದ್ದಾರೆ. ಈಗ ಅವರನ್ನು ಸಾಲ ಮನ್ನಾ ಮಾಡಿ ಎಂದು ಕೇಳಿದರೆ, ಜನ ನನಗೆ ಅಧಿಕಾರ ನೀಡಿಲ್ಲ. ಕಾಂಗ್ರೆಸ್‍ರವರಿಂದ ಅಧಿಕಾರ ಹಿಡಿದಿದ್ದೇನೆ. ರಾಜ್ಯದ ಆರೂವರೆ ಕೋಟಿ ಜನರನ್ನು ನಾನು ಪ್ರತಿನಿಧಿಸುತ್ತಿಲ್ಲ ಎಂದು ಸಾಲ ಮನ್ನಾ ಭರವಸೆಯಿಂದ ನುಣುಚಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಆದರೆ ಕುಮಾರಸ್ವಾಮಿ ಅವರ ನಿತ್ಯದ ಸರಕಾರಿ ಖರ್ಚು ಜನರ ತೆರಿಗೆ ಹಣ ಎನ್ನುವುದನ್ನು ಮರೆಯಬಾರದು. ಅವರು ಖರ್ಚು ಮಾಡುತ್ತಿರುವ ಖಜಾನೆ ಹಣ ಈ ರಾಜ್ಯದ ಜನರ ತೆರಿಗೆ ಹಣವೇ ಹೊರತು ಅದು ಕಾಂಗ್ರೆಸ್‍ನ ರಾಹುಲ್ ಗಾಂಧಿ, ಸೋನಿಯ ಗಾಂಧಿಯವರ ಹಣವಲ್ಲ ಎಂಬುದನ್ನು ಅರಿಯಬೇಕು. ಕುಮಾರಸ್ವಾಮಿ ಆರೂವರೆ ಕೋಟಿ ಜನರನ್ನು ಪ್ರತಿನಿಧಿಸುವುದು ನಿಜವಾದರೆ ರಾಜ್ಯದ ರೈತರು ರಾಷ್ಟ್ರೀಕೃತ, ಖಾಸಗಿ ಬ್ಯಾಂಕ್‍ಗಳಲ್ಲಿ ಹಾಗೂ ಲೇವಾದೇವಿ ಸಂಸ್ಥೆಗಳಲ್ಲಿ ಮಾಡಿರುವ ಸಾಲವನ್ನು ಮನ್ನಾ ಮಾಡಿ ಎಂದು ಒತ್ತಾಯಿಸಿದರು.
ಕೊಟ್ಟ ಮಾತು ಮರೆತಿರುವುದರಿಂದ ಶಾಂತಿಯುತ ಹೋರಾಟದ ಮೂಲಕ ಎಚ್ಚರಿಸುವ ಕೆಲಸ ಮಾಡಿದ್ದೇವೆ. ಇನ್ನೊಂದು ವಾರದಲ್ಲಿ ರೈತರ ಸಂಪೂರ್ಣ ಸಾಲಮನ್ನಾ ಮಾಡದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ ಸಿ.ಟಿ.ರವಿ, ಸಾಲಮನ್ನಾ ಮಾಡದಿದ್ದರೆ ರೈತರೇ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ನಿಮ್ಮ ಜುಟ್ಟು ಹಿಡಿದು ಪ್ರಶ್ನಿಸುತ್ತಾರೆ ಎಂದರು. ನಂತರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಇದಕ್ಕೂ ಮೊದಲು ನಗರದ ಹನುಮಂತಪ್ಪ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಎರಡು ಎತ್ತಿನಗಾಡಿಗಳೊಂದಿಗೆ ಪ್ರತಿಭಟನಾ ನಡೆಸಿದ ಕಾರ್ಯಕರ್ತರು ಮೈತ್ರಿ ಸರಕಾರದ ವಿರುದ್ಧ ಧಿಕ್ಕಾರ ಘೋಷಣೆಗಳನ್ನು ಕೂಗಿದರು.
ತಾಪಂ ಅಧ್ಯಕ್ಷ ಈಶ್ವರಹಳ್ಳಿ ಮಹೇಶ್, ಬಿಜೆಪಿ ಮುಖಂಡರಾದ ಎಚ್.ಡಿ.ತಮ್ಮಯ್ಯ, ವರಸಿದ್ದಿ ವೇಣುಗೋಪಾಲ್, ಪುಪ್ಪರಾಜ್, ದೇವರಾಜ್ ಶೆಟ್ಟಿ, ರಾಜ್‍ಶೇಖರ್ ಸೇರಿದಂತೆ ಬಿಜೆಪಿ ರೈತ ಮೋಚಾದ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ರಾಜೀನಾಮೆ ನೀಡಿ:
ಕೆಲವರು ಸಾಲಮನ್ನಾ ಮಾಡಲು ಒಂದು ವಾರದ ಅವಕಾಶ ನೀಡಬೇಕಿತ್ತು,ಇಷ್ಟು ಬೇಗ ರಾಜ್ಯ ಬಂದ್‍ಗೆ ಕರೆ ನೀಡಬಾರದಿತ್ತು ಎಂದು ಹೇಳುತ್ತಿದ್ದಾರೆ. ಒಂದು ವಾರವೇನು ಆರು ತಿಂಗಳು ಬೇಕಾದರೂ ಸಿಎಂಗೆ ಅವಕಾಶ ನೀಡುತ್ತಿದ್ದೆವು. ಆದರೆ ಅಧಿಕಾರಕ್ಕೆ ಬಂದ ನಂತರ ಸಿಎಂ ಮಾತಿನ ವರಸೆ ಬದಲಾಗಿದೆ. ರೈತರ ಸಾಲಮನ್ನಾ ಮಾಡುವುದಿಲ್ಲ ಎಂಬ ಅನುಮಾನ ಜನರನ್ನು ಕಾಡುತ್ತಿದೆ. ಕುಮಾರಸ್ವಾಮಿ ಹಾಗೂ ದೇವೇಗೌಡ ಅವರಿಗೆ ಕುರ್ಚಿಯ ಮೇಲೆ ವ್ಯಾಮೋಹವೇ ಹೊರತು ಜನರ ಮೇಲೆ ಪ್ರೀತಿ ವಿಶ್ವಾಸವಿಲ್ಲ ಎಂಬುದು ಅವರ ಮಾತಿನಿಂದ ಗೊತ್ತಾಗುತ್ತಿದೆ. ಎಚ್ಡಿಕೆ ಕೊಟ್ಟ ಮಾತಿಗೆ ತಪ್ಪಿದರೆ ರೈತರು ಕ್ಷಮಿಸುವುದಿಲ್ಲ, ರೈತರ ಸಾಲಮನ್ನಾ ಮಾಡಲು ಸಾಧ್ಯವಿಲ್ಲ ಎಂದರೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ.
- ಸಿ.ಟಿ.ರವಿ, ಶಾಸಕ







