ಚಿಕ್ಕಮಗಳೂರು: ನಗರಸಭೆ ಸದಸ್ಯರಿಂದ ಬಡಾವಣೆಗಳಿಗೆ ನೀರು ಪೂರೈಕೆಯಲ್ಲಿ ತಾರತಮ್ಯ; ಆರೋಪ
ಚಿಕ್ಕಮಗಳೂರು, ಮೇ 28: ನಗರದ ಗೌರಿ ಕಾಲುವೆ ಬಡಾವಣೆಗೆ ಕಳೆದ ಒಂದು ತಿಂಗಳಿಂದ ಸಮರ್ಪಕವಾಗಿ ಕುಡಿಯುವ ನೀರಿನ ಸರಬರಾಜಾಗುತ್ತಿಲ್ಲ. ಪರಿಣಾಮ ಕುಡಿಯಲು ನೀರಿಲ್ಲದೇ ಬಡಾವಣೆಯ ಜನ ಹಪಹಪಸುತ್ತಿದ್ದಾರೆಂದು ಕಾಂಗ್ರೆಸ್ ಮುಖಂಡ ಹಾಗೂ ನಗರಸಭೆ ಸದಸ್ಯ ರೂಬೆನ್ ಮೊಸೆಸೆ ಆರೋಪಿಸಿದ್ದಾರೆ.
ನಗರಸಭೆ ಬಡಾವಣಗೆ ಟ್ಯಾಂಕರ್ ನಲ್ಲಿ ನೀರು ಪೂರೈಸುತ್ತಿದೆಯಾದರೂ ಈ ನೀರು ಯಾರಿಗೂ ಸಾಕಾಗುತ್ತಿಲ್ಲ. ಮಂಗಳವಾರ ನೀರು ಬಿಡದಿದ್ದರೆ ನಗರಸಭೆ ವ್ಯಾಪ್ತಿಯ 31ನೇ ವಾರ್ಡಿನಲ್ಲಿ ಸ್ಥಳೀಯ ನಿವಾಸಿಗಳೊಂದಿಗೆ ಕಾಲಿಕೊಡ ಪ್ರದರ್ಶನ ಮಾಡಿ ಪ್ರತಿಭಟನೆ ಮಾಡಲಾಗುವುದೆಂದು ಎಚ್ಚರಿಸಿರುವ ಅವರು, ಕುಡಿಯುವ ನೀರಿನ ಪೂರೈಕೆ ಸಂಬಂಧ ನಗರಸಭೆ ಅಧಿಕಾರಿಗಳು ಹಾಗೂ ಅಧ್ಯಕ್ಷರು ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ. ಕಾಂಗ್ರೆಸ್ ಸದಸ್ಯರಿರುವಲ್ಲಿಗೆ ನೀರು ಪೂರೈಕೆ ಮಾಡದೇ ಬಿಜೆಪಿ ಸದಸ್ಯರಿರುವ ವಾರ್ಡ್‍ಗಳಿಗೆ ಪ್ರತೀ ದಿನ ನೀರು ಪೂರೈಸಲಾಗುತ್ತಿದೆ. ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಹಚ್ಚುವ ಕೆಲಸ ನಗರಸಭೆಯಿಂದ ಆಗುತ್ತಿದೆ. ನಗರಸಭೆಯಲ್ಲಿ ಬಿಜೆಪಿಯವರಿಗೆ ಬಹುಮತ ಇದೆ ಎಂಬ ಒಂದೇ ಒಂದು ಕಾರಣಕ್ಕಾಗಿ 1080 ರೂ. ಇದ್ದ ನೀರಿನ ಕಂದಾಯವನ್ನು 1480ಕ್ಕೆ ಏರಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ನಗರಸ ಕೆಲ ವಾರ್ಡ್‍ಗಳಲ್ಲಿ ಕೈ ಪಂಪುಗಳು ಕೆಟ್ಟು ನಿಂತಿವೆ. ಕಳೆದ ಎರಡು ವರ್ಷಗಳಿಂದ ಅದನ್ನು ರಿಪೇರಿ ಮಾಡುವ ಯೋಗ್ಯತೆ ನಗರಸಭೆಗಿಲ್ಲ. ಅಧಿಕಾರಿಗಳು ಕೇಳಿದರೆ ಉಡಾಫೆ ಉತ್ತರ ನೀಡುತ್ತಾರೆ. ಕಳೆದ ಅನೇಕ ವರ್ಷಗಳಿಂದ ಬಿಜೆಪಿ ಆಡಳಿತ ಮಾಡುತ್ತಿರುವ ನಗರಸಭೆಯಿಂದ ಅಭಿವೃದ್ಧಿ ಶೂನ್ಯವಾಗಿದೆ ಎಂದು ಆರೋಪಿಸಿರುವ ಅವರು, ನೀರು ಬಿಡುವುದರಲ್ಲೂ ವಾರ್ಡ್‍ಗಳಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿರುವ ನಗರಸಭೆ ಆಡಳಿತ ಗೌರಿಕಾಲುವೆಗೆ ನೀರಿನ ವ್ಯವಸ್ಥೆ ಮಾಡದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿರುವ ಅವರು ಚುನಾವಣೆ ಸಂದರ್ಭದಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿದ್ದ ಶಾಸಕ ಸಿ.ಟಿ.ರವಿಯವರು ಈಗ ಎಲ್ಲಿ ನೀರು ಹಾಗೂ ರೈಲು ಬಿಡುತ್ತಿದ್ದಾರೆ ಎಂದು ಅವರು ಪ್ರಶ್ನಿಸಿದ್ದಾರೆ.







