ಫ್ಲೋರಿಡಾಗೆ ಅಲ್ಬೆರ್ಟೊ ಭೀತಿ
ಮಿಸಿಸಿಪ್ಪಿ, ಅಲಬಾಮಾ ರಾಜ್ಯಗಳೂ ಚಂಡಮಾರುತದ ದವಡೆಯಲ್ಲಿ

ಫ್ಲೊರಿಡಾ,ಮೇ 28: ಅರೆಉಷ್ಣವಲಯದ ಅಲ್ಬೆರ್ಟೊ ಚಂಡಮಾರುತವು ಸೋಮವಾರ ತಡರಾತ್ರಿ ಅಪ್ಪಳಿಸುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಅಮೆರಿಕದ ಅಲಬಾಮಾ, ಫ್ಲೋರಿಡಾ ಹಾಗೂ ಮಿಸಿಸಿಪ್ಪಿ ರಾಜ್ಯಗಳಲ್ಲಿ ತುರ್ತುಸ್ಥಿತಿಯನ್ನು ಘೋಷಿಸಲಾಗಿದ್ದು, ತೀರಪ್ರದೇಶಗಳ ಜನರು ಸ್ಥಳಾಂತರಗೊಳ್ಳುವಂತೆ ಸೂಚನೆ ನೀಡಲಾಗಿದೆ.
ಮೆಕ್ಸಿಕೊ ಕೊಲ್ಲಿಯಿಂದ ಉತ್ತರದಿಕ್ಕಿನತ್ತ ವೇಗವಾಗಿ ಸಾಗುತ್ತಿದ್ದು, ಮಂಗಳವಾರ ಮುಂಜಾನೆಯ ವೇಳೆ ಫ್ಲಾರಿಡಾ ಸೇರಿದಂತೆ ಅಮೆರಿಕದ ದಕ್ಷಿಣ ಕರಾವಳಿಯ ರಾಜ್ಯಗಳಲ್ಲಿ ಭಾರೀ ಹಾನಿಯುಂಟು ಮಾಡುವ ಸಾಧ್ಯತೆಯಿದೆಯೆಂದು ಹವಾಮಾನ ತಜ್ಞರು ಸೋಮವಾರ ಎಚ್ಚರಿಕೆ ನೀಡಿದ್ದಾರೆ.
ಸೋಮವಾರ ಬೆಳಗ್ಗೆ 8:00 ಗಂಟೆಗೆ ಮೆಕ್ಸಿಕೊ ಕೊಲ್ಲಿಯನ್ನು ತಲುಪಿರುವ ಚಂಡಮಾರುತವು ಸೋಮವಾರ ತಡರಾತ್ರಿಯ ವೇಳೆಗೆ ಫ್ಲೋರಿಡಾದ ಪ್ಯಾನ್‌ಹ್ಯಾಂಡಲ್ ತೀರಪ್ರದೇಶದ ಮೇಲೆ ಅಪ್ಪಳಿಸಲಿದೆಯೆಂದು ಅಮೆರಿಕದ ರಾಷ್ಟ್ರೀಯ ಚಂಡಮಾರುತ ಕೇಂದ್ರವು ಎಚ್ಚರಿಕೆ ನೀಡಿದೆ.
ಚಂಡಮಾರುತದೊಂದಿಗೆ ತಾಸಿಗೆ 105 ಕಿ.ಮೀ. ವೇಗದಲ್ಲಿ ಬಲವಾದ ಗಾಳಿ ಬೀಸುತ್ತಿದ್ದು, 12 ಇಂಚು ಮಳೆಯಾಗುತ್ತಿದೆಯೆಂದು ಮಿಯಾಮಿ ಮೂಲದ ಚಂಡಮಾರುತ ವೀಕ್ಷಣಾ ಕೇಂದ್ರವು ತಿಳಿಸಿದೆ.
ಅಲ್ಬೆರ್ಟೊ ಚಂಡಮಾರುತ ಅಪ್ಪಳಿಸುವ ಭೀತಿಯ ಹಿನ್ನೆಲೆಯಲ್ಲಿ ಫ್ಲೋರಿಡಾ ಪ್ಯಾನ್‌ಹ್ಯಾಂಡೆಲ್‌ನ ಫ್ರಾಂಕ್ಲಿನ್ ಕೌಂಟಿಯು ಮೆಕ್ಸಿಕೊ ಕೊಲ್ಲಿಯ ದ್ವೀಪ ಪ್ರದೇಶದ 4200 ನಿವಾಸಿಗಳು ಕಡ್ಡಾಯವಾಗಿ ಸ್ಥಳಾಂತರಗೊಳ್ಳುವಂತೆ ಆದೇಶಿಸಿದೆ. ಚಂಡಮಾರುತ ಅಪ್ಪಳಿಸುವ ಭೀತಿಯಿಂದಾಗಿ ಫ್ಲೋರಿಡಾದ ಗವರ್ನರ್ ರಿಕ್ ಸ್ಕಾಟ್ ಅವರು ರಾಜ್ಯದ ಎಲ್ಲಾ 67 ಕೌಂಟಿ (ಜಿಲ್ಲೆ)ಗಳಲ್ಲಿ ತುರ್ತುಪರಿಸ್ಥಿತಿ ಘೋಷಿಸಿದ್ದಾರೆ. ಯಾವುದೇ ಸನ್ನಿವೇಶವನ್ನು ಎದುರಿಸಲು 5500 ರಕ್ಷಣಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆಯೆಂದು ಫ್ಲೋರಿಡಾದ ನ್ಯಾಶನಲ್ ಗಾರ್ಡ್ ದಳವು ತಿಳಿಸಿದೆ.







