ದಕ್ಷಿಣ ಶಿಕ್ಷಕರ ಕ್ಷೇತ್ರ ಚುನಾವಣೆ: ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಅಭ್ಯರ್ಥಿಗಳೊಂದಿಗೆ ಸಂವಾದ

ಮೈಸೂರು,ಮೇ.28: ಶಿಕ್ಷಕರ ಸಮಸ್ಯೆ ನಿರಂತರ ಅದನ್ನು ಬಗೆಹರಿಸುವ ಕೆಲಸವನ್ನು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಎಂದು ದಕ್ಷಿಣ ಶಿಕ್ಷಕರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ವಿಧಾನಸಭಾ ಉಪಸಭಾಪತಿ ಮರಿತಿಬ್ಬೇಗೌಡ ಹೇಳಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆ ಹಿನ್ನಲೆಯಲ್ಲಿ ಪ್ರಮುಖ ಮೂರು ಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಅಭ್ಯರ್ಥಿಗಳೊಂದಿಗೆ ಏರ್ಪಡಿಸಿದ್ದ ಸಂವಾದದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕಳೆದ ಮೂರು ಬಾರಿ ದಕ್ಷಿಣ ಕ್ಷೇತ್ರದಿಂದ ಆಯ್ಕೆಯಾಗಿ ಶಿಕ್ಷಕರ ಸಮಸ್ಯೆಯನ್ನು ಬಗೆಹರಿಸುತ್ತಾ ಬಂದಿದ್ದೇನೆ. ಶಿಕ್ಷಕರ ಸಮಸ್ಯೆ ನಿರಂತರ. ಸಮಸ್ಯೆಗಳನ್ನು ಬಗೆಹರಿಸಿದರೂ ಮತ್ತೆ ಮತ್ತೆ ಹೊಸ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ನಾನು ಶಿಕ್ಷಕರ ಒಡನಾಡಿಯಾಗಿ ಅವರ ಸಮಸ್ಯೆಗಳನ್ನು ಪ್ರಮಾಣಿಕವಾಗಿ ಬಗೆಹರಿಸಿದ್ದೇನೆ ಎಂದರು.
ರಾಜ್ಯದ 7 ವಿಶ್ವವಿದ್ಯಾನಿಲಯಗಳಲ್ಲಿ ಕುಲಪತಿಗಳಿಲ್ಲದೇ ಅನಾಥವಾಗಿದ್ದು, ಅವಧಿ ಮುಗಿಯುವುದರೊಳಗೆ ಕುಲಪತಿಗಳನ್ನು ನೇಮಕಗೊಳಿಸದೇ ಇರುವುದು ಸರ್ಕಾರದ ಬಹುದೊಡ್ಡ ವೈಫಲ್ಯವೆಂದು ದೂರಿದರು. ಇದಲ್ಲದೇ ದೇಶದ ಹೆಮ್ಮೆಯ ಪ್ರತೀಕವಾದ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಒಂದು ವರ್ಷ 7 ತಿಂಗಳು ಕಳೆದರೂ ಕುಲಪತಿಗಳನ್ನು ನೇಮಕಗೊಳಿಸದೆ ಸರ್ಕಾರ ಶೈಕ್ಷಣಿಕ ವಿಭಾಗವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ, ಕುಲಪತಿಗಳ ನೇಮಕಕ್ಕೆ ಸಂಬಂಧವಾಗಿ 4 ಬಾರಿ ಪತ್ರ ವ್ಯವಹಾರ ನಡೆಸಿದ್ದೆ ಎಂದು ತಿಳಿಸಿದರು.
ಅತಿಥಿ ಉಪನ್ಯಾಸಕರ ನೇಮಕಾತಿ ಮಾಡಬೇಕೆಂದು ಹೋರಾಟ ಮಾಡುತ್ತ ಬಂದಿದ್ದೇನೆ. ಅತಿಥಿ ಉಪನ್ಯಾಸಕರು ಕಳೆದ ಹತ್ತು ಹನ್ನೆರಡು ವರ್ಷದಿಂದ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಖಾಯಂ ಉಪನ್ಯಾಸಕರು ಬಂದ ತಕ್ಷಣ ಇವರನ್ನು ತೆಗೆದುಹಾಕುವುದು ಸರಿಯಲ್ಲ. ಇವರಿಗೆ ಉದ್ಯೋಗ ಭದ್ರತೆ ಬೇಕು ಎಂದು ಹೋರಾಟ ಮಾಡುತ್ತಾ ಬಂದಿದ್ದೇನೆ. ಹಾಗಾಗಿ ಈ ಬಾರಿಯೂ ಶಿಕ್ಷಕ ವರ್ಗ ನನನ್ನು ಆಯ್ಕೆಮಾಡುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಮಾತನಾಡಿ, ಶಿಕ್ಷಕರ ಸಮಸ್ಯೆಗಳು ಹಲವಾರು ಇವೆ. ನಾನು ಕಳೆದ ಬಾರಿ ಸೋತ ನಂತರ ಶಿಕ್ಷಕರ ಪ್ರತಿಯೊಂದು ಸಮಸ್ಯೆಗಳ ಪರಿಹಾರಕ್ಕೆ ದುಡಿದಿದ್ದೇನೆ. ಬಡ್ತಿ ಶಿಕ್ಷಕರಿಗೆ ಆದ ವೇತನ ತಾರತಮ್ಯ ಮತ್ತು ಸೇವಾನುಭದ ಅನ್ಯಾಯವನ್ನು ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಶಿಕ್ಷಣ ಸಚಿವ ತನ್ವೀರ್ ಸೇಠ್ ಅವರ ಗಮನ ಸೆಳೆದು 01-04-2016 ರಿಂದ ಜಾರಿಗೆ ಬರುವಂತೆ ಪರಿಹರಿಸುವಲ್ಲಿ ಯಶಸ್ವಿಯಾಗಿದ್ದೇನೆ. ಕಾಲ್ಪನಿಕ ವೇತನ ನಿವಾರಣೆಗೆ ಸಾಕಷ್ಟ ಶ್ರಮಿಸಿದ್ದೇನೆ ಎಂದರು.
ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‍ಪಿಎಸ್) ರದ್ದುಗೊಳಿಸಬೇಕು ಎಂಬುದು ಪ್ರಮುಖ. ಇದರಿಂದ ಶಿಕ್ಷಕ ವರ್ಗ ಆತಂಕದಲ್ಲಿದ್ದಾರೆ. ಕೇಂದ್ರ ಸರಕಾರ ಈ ಯೋಜನೆ ಜಾರಿ ಮಾಡಿದ್ದರೂ ರಾಜ್ಯ ಸರಕಾರ ರದ್ದಗೊಳಿಸಬಹುದು. ಮಾನ್ಯ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಚುನಾವಣಾ ಪೂರ್ವ ರದ್ದುಗೊಳಿಸುವ ಭರವಸೆ ನೀಡಿದ್ದಾರೆ. ಜೊತೆಗೆ ಅತಿಥಿ ಉಪನ್ಯಾಸಕರ ಖಾಯಂಗೊಳಿಸುವುದಾಗಿ ಹೇಳಿದ್ದಾರೆ. ನಾನು ಆಯ್ಕೆಯಾದರೆ ಆರು ತಿಂಗಳಲ್ಲಿ ಇವೆರೆಡು ಸಮಸ್ಯೆಗಳನ್ನು ಪರಿಹರಿಸುತ್ತೇನೆ. ಇಲ್ಲದಿದ್ದರೆ ರಾಜೀನಾಮೆ ನೀಡುವುದಾಗಿ ಹೇಳಿದರು.
ಹೋರಾಟ ಮಾಡಿಕೊಂಡಿದ್ದ ನನಗೆ ಸಂವಿಧಾನ ಬದ್ಧ ಅಧಿಕಾರ ಸಿಕ್ಕರೆ ಮತ್ತಷ್ಟು ಕೆಲಸಗಳನ್ನು ಮಾಡಬಹುದು ಎಂಬ ಹುಚ್ಚನ್ನು ಹಿಡಿಸಿದರು. ಹಾಗಾಗಿ ನಾನು ಚುನಾವಣೆಗೆ ಸ್ಪರ್ಧೆ ಮಾಡಿದೆ. ಒಮ್ಮೆ ಚಾಮರಾಜ ವಿಧಾಸಭಾ ಕ್ಷೇತ್ರದಿಂದ ಸ್ಪರ್ಧೆಮಾಡಿ ಸೋತೆ. ನಂತರ ಪದವೀದರ ಕ್ಷೇತ್ರದ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ನಿಂತು ಸೋಲಬೇಕಾಯಿತು. ನಂತರ ಕಾಂಗ್ರೆಸ್ ಪಕ್ಷ 2012ರಲ್ಲಿ ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಟಿಕೆಟ್ ನೀಡಿತು. ಕೇವಲ 700 ಮತಗಳ ಅಂತರದಿಂದ ಸೋಲುಂಟಾಯಿತು. ಇದೀಗ ಬೀದಿಗೆ ಬಂದಿದ್ದೇನೆ. ಇದು ನನ್ನ ಕೊನೆ ಚುನಾವಣೆ. ದಯಮಾಡಿ ಒಮ್ಮೆ ನನಗೆ ಅವಕಾಶ ನೀಡಿ ಎಂದು ಎದ್ದು ಕೈಮುಗಿದು ಮನವಿ ಮಾಡಿದರು.
ಸಂವಾದಲ್ಲಿ ಭಾಗಿಯಾಗಿದ್ದ ಬಿಜೆಪಿ ಅಭ್ಯರ್ಥಿ ನಿರಂಜನ ಮೂರ್ತಿ ಮಾತನಾಡಿ, ಮತದಾನದಿಂದಲೂ ವಂಚಿತರಾಗಿರುವ ಅರೆಕಾಲಿಕ ಉಪನ್ಯಾಸಕರ ಸ್ಥಿತಿಯೂ ತೀರ ಶೋಚನೀಯವಾಗಿದೆ, ಅಲ್ಲದೇ ಶಿಕ್ಷಣ ಹಕ್ಕುಗಳನ್ನು ಮೊಟಕುಗೊಳಿಸುವ ನಿಟ್ಟಿನಲ್ಲಿ ಕೈಗೊಂಡಿರುವ ಚುನಾವಣಾ ಆಯೋಗ ಮತದಾನ ರದ್ದುಮಾಡಿರುವ ನೀತಿಯು ಪ್ರಜಾಪ್ರಭುತ್ವ ವಿರೋಧಿಯಾಗಿದೆ ಎಂದರು.
ಅಲ್ಲದೇ ಶಿಕ್ಷಕರಿಗೆ ಪ್ರಾಮಾಣಿಕ ವೇತನ, ಹೊಸ ಪಿಂಚಣಿ ಯೋಜನೆ, ಗುತ್ತಿಗೆ ಶಿಕ್ಷಕರಿಗೆ ನ್ಯಾಯ, ಕಾಲ್ಪನಿಕ ವೇತನ, ವೇತನ ತಾರತಮ್ಯ, ವರ್ಗಾವಣೆ ಬಗ್ಗೆ ಸರ್ಕಾರ ತಳೆದಿರುವ ನೀತಿಯನ್ನು ಖಂಡಿಸಿದರು.
ಸಂವಾದದಲ್ಲಿ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ, ಪ್ರಧಾನ ಕಾರ್ಯದರ್ಶಿ ಕೆ.ಜೆ.ಲೋಕೇಶ್ ಬಾಬು, ಉಪಾಧ್ಯಕ್ಷ ಸುಬ್ರಮಣ್ಯ ಉಪಸ್ಥಿತರಿದ್ದರು.







