ಮೈಸೂರು: ಬಿಜೆಪಿಯ ಬಂದ್ ಕರೆ ಸಂಪೂರ್ಣ ವಿಫಲ
ಮೈಸೂರು,ಮೇ.28: ರೈತರ ಸಾಲ ಮನ್ನಾ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಕರೆ ನೀಡಿದ್ದ ಬಂದ್ ಮೈಸೂರಿನಲ್ಲಿ ಸಂಪೂರ್ಣ ವಿಫಲಗೊಂಡಿದೆ.
ಕುಮಾರಸ್ವಾಮಿ ಮುಖ್ಯಮಂತ್ರಿಯಾದ ಬಳಿಕ 24 ಗಂಟೆಗಳಲ್ಲಿ ರೈತರ ಸಾಲಮನ್ನಾ ಮಾಡುವುದಾಗಿ ಹೇಳಿ ಪಲಾಯನವಾದ ಮಾಡುತ್ತಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆಗಿಳಿದಿದ್ದ ಬಿಜೆಪಿ ನಾಯಕರನ್ನು ಪೊಲೀಸರು ಬಂಧಿಸಿ ನಂತರ ಬಿಡುಗಡೆಗೊಳಿಸಿದರು.
ಮೈಸೂರು ನಗರ ಮತ್ತು ಜಿಲ್ಲೆಯಲ್ಲಿ ಬಂದ್‍ನ ಬಿಸಿ ತಟ್ಟಲಿಲ್ಲ. ಎಂದಿನಂತೆ ಸಂಚಾರ ವ್ಯವಸ್ಥೆ, ಶಾಲಾ-ಕಾಲೇಜುಗಳು, ಅಂಗಡಿ-ಮುಂಗಟ್ಟುಗಳು, ಸರಕಾರಿ ಕಚೇರಿಗಳು ಕಾರ್ಯನಿರ್ವಹಿಸಿದವು.
ನಗರದ ಬನ್ನಿ ಮಂಟಪದಲ್ಲಿರುವ ಬಸ್ ಡಿಪೋದಲ್ಲಿ ಸಂಸದ ಪ್ರತಾಪ್ ಸಿಂಹ, ಶಾಸಕರಾದ ರಾಮದಾಸ್, ನಾಗೇಮದ್ರ ಸಿ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಬಸ್‍ಗಳನ್ನು ತಡೆದು ಪ್ರತಿಭಟನೆಗೆ ಮುಂದಾದರು. ತಕ್ಷಣ ಪೊಲೀಸರು ಮುಂಜಾಗ್ರತೆ ವಹಿಸಿ ಸಂಸದ ಮತ್ತು ಶಾಸಕರನ್ನು ವಶಕ್ಕೆ ಪಡೆದರು.
ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ: ಸಂಸದ ಮತ್ತು ಶಾಸಕರನ್ನು ಬಂಧಿಸಿದ ಕ್ರಮವನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ಗಾಂಧಿ ವೃತ್ತದ ಬಳಿ ಪ್ರತಿಭಟನೆಗಿಳಿದರು. ಪ್ರತಾಪ್ ಸಿಂಹ, ಎಸ್.ಎ.ರಾಮದಾಸ್ ಮತ್ತು ಎಲ್.ನಾಗೇಂದ್ರ ಅವರನ್ನು ಕೂಡಲೇ ಬಿಡುಗಡೆಗೊಳಿಸಿಬೇಕು ಎಂದು ಆಗ್ರಹಿಸಿದರು.
ಗುಲಾಬಿ ಹೂ ನೀಡಿದ ಜೆಡಿಎಸ್ ಕಾರ್ಯಕರ್ತರು: ಬಂದ್ ಮಾಡದಂತೆ ಜೆಡಿಎಸ್ ಕಾರ್ಯಕರ್ತರು ಅಂಗಡಿ ಮುಂಗಟ್ಟುಗಳ ಮಾಲೀಕರಿಗೆ ಗುಲಾಬಿ ಹೂ ನೀಡಿ ಮನವಿ ಮಾಡಿದರು.







