ಗಿಲ್ಗಿಟ್-ಬಾಲ್ಟಿಸ್ತಾನ್‌ಗೆ ಪ್ರಾಂತೀಯ ಸ್ಥಾನಮಾನ: ಭಾರತದ ಪ್ರತಿಭಟನೆ ತಳ್ಳಿಹಾಕಿದ ಪಾಕ್

ಇಸ್ಲಾಮಾಬಾದ್,ಮೇ 28: ವಿವಾದಿತ ಗಿಲ್ಗಿಟ್ ಬಾಲ್ಟಿಸ್ತಾನ್ ಪ್ರಾಂತದ ಆಡಳಿತಾತ್ಮಕ ಸ್ಥಾಮಾನವನ್ನು ಬದಲಾಯಿಸುವ ತನ್ನ ನಿರ್ಧಾರದ ವಿರುದ್ಧ ಭಾರದ ಪ್ರತಿಭಟನೆಯನ್ನು ಪಾಕಿಸ್ತಾನ ತಳ್ಳಿಹಾಕಿದೆ. ಜಮ್ಮುಕಾಶ್ಮೀರದ ಮೇಲೆ ದಿಲ್ಲಿ ಹಕ್ಕು ಸಾಧಿಸಿರುವುದು, ಐತಿಹಾಸಿಕ ವಾಸ್ತವಿಕತೆಗೆ ವ್ಯತಿರಿಕ್ತವಾದುದಾಗಿದೆಯೆಂದು ಅದು ಟೀಕಿಸಿದೆ.
ಮೇ 21ರಂದು ಪಾಕಿಸ್ತಾನ ಸಂಪುಟವು ಗಿಲ್ಗಿಟ್-ಬಾಲ್ಟಿಸ್ತಾನ್ ಆದೇಶ -2018ಕ್ಕೆ ಅನುಮೋದನೆ ನೀಡಿದ್ದು, ಅದನ್ನು ಆ ಪ್ರಾಂತದ ಅಸೆಂಬ್ಲಿಯು ಅನುಮೋದಿಸಿತ್ತು. ಪಾಕ್ ಆಕ್ರಮಿತ ಕಾಶ್ಮೀರದ ಭಾಗವಾದ ಗಿಲ್ಗಿಟ್-ಬಾಲ್ಟಿಸ್ತಾನ್ ಅನ್ನು ದೇಶದ ಐದನೆ ಪ್ರಾಂತವಾಗಿ ಘೋಷಿಸುವ ಪ್ರಯತ್ನವಾಗಿ ಪಾಕ್ ಈ ಆದೇಶವನ್ನು ಜಾರಿಗೆ ತಂದಿದೆಯೆಂದು ಭಾವಿಸಲಾಗಿದೆ.
ಈ ಬಗ್ಗೆ ಪಾಕ್ ವಿದೇಶಾಂಗ ಸಚಿವಾಲಯದ ವಕ್ತಾರರೊಬ್ಬರು ಹೇಳಿಕೆ ನೀಡಿ, ‘‘ 2018ರ ಗಿಲ್ಗಿಟ್-ಬಾಲ್ಟಿಸ್ತಾನ್ ಆದೇಶಕ್ಕೆ ಭಾರತದ ಪ್ರತಿಭಟನೆಯನ್ನು ಹಾಗೂ ಗಿಲ್ಗಿಟ್ ಬಾಲ್ಟಿಸ್ತಾನ್ ಜಮ್ಮುಕಾಶ್ಮೀರದ ಅವಿಭಾಜ್ಯ ಅಂಗವೆಂಬ ಅದರ ವಾದವನ್ನು ಪಾಕಿಸ್ತಾನ ಸ್ಪಷ್ಟವಾಗಿ ತಿರಸ್ಕರಿಸುತ್ತದೆ ಎಂದವರು ಹೇಳಿದ್ದಾರೆ.
ಭಾರತವು ರವಿವಾರದಂದು ಹೊಸದಿಲ್ಲಿಯಲ್ಲಿರುವ ಪಾಕಿಸ್ತಾನದ ಉಪ ಹೈಕಮೀಶನರ್ ಸೈಯದ್ ಹೈದರ್ ಶಾ ಅವರನ್ನು ಕರೆಯಿಸಿಕೊಂಡು, ಇಸ್ಲಾಮಾಬಾದ್‌ನ ಈ ನಡೆಯ ವಿರುದ್ಧ ತನ್ನ ಪ್ರಬಲ ವಿರೋಧ ವ್ಯಕ್ತಪಡಿಸಿತ್ತು. ಪಾಕಿಸ್ತಾನವು ಬಲವಂತವಾಗಿ ಹಾಗೂ ಅಕ್ರಮವಾಗಿ ಸ್ವಾಧೀನಪಡಿಸಿಕೊಂಡಿರುವ ಪ್ರದೇಶ(ಪಿಓಕೆ) ದ ಯಾವುದೇ ಭಾಗದ ಸ್ಥಾನಮಾನವನ್ನು ಬದಲಾಯಿಸುವ ಕ್ರಮವನ್ನು ತಾನು ವಿರೋಧಿಸುವುದಾಗಿ ಭಾರತ ತಿಳಿಸಿತ್ತು. ಗಿಲ್ಗಿಟ್-ಬಾಲ್ಟಿಸ್ತಾನ್‌ಸೇರಿದಂತೆ ಸಮಗ್ರ ಪಿಓಕೆಯು ಜಮ್ಮುಕಾಶ್ಮೀರ ಭಾಗವೆಂದು ಭಾರತ ಪರಿಗಣಿಸಿದೆ.
ತಥಾಕಥಿತ ಗಿಲ್ಗಿಟ್-ಬಾಲ್ಟಿಸ್ತಾನ್ ಪ್ರದೇಶವನ್ನು ಒಳಗೊಂಡ ಇಡೀ ಜಮ್ಮುಕಾಶ್ಮೀರವು ಭಾರತದ ಅವಿಭಾಜ್ಯವೆಂದು ಭಾರತದ ವಿದೇಶಾಂಗ ಸಚಿವಾಲಯವು ಶಾ ಅವರಿಗೆ ತಿಳಿಸಿತ್ತು.







