ಪೌರಕಾರ್ಮಿಕರನ್ನು ವಿಧಾನ ಪರಿಷತ್‍ಗೆ ನಾಮ ನಿರ್ದೇಶ ಮಾಡಿ: ಮಾಜಿ ಮೇಯರ್ ನಾರಾಯಣ ಒತ್ತಾಯ
ಮೈಸೂರು,ಮೇ.28: ಪೌರ ಕಾರ್ಮಿಕ ಪ್ರತಿನಿಧಿಯನ್ನು ರಾಜ್ಯ ವಿಧಾನಪರಿಷತ್ ಸದಸ್ಯರನ್ನಾಗಿ ನಾಮ ನಿರ್ದೇಶನಗೊಳಿಸುವ ಮೂಲಕ ರಾಜಕೀಯ ಪ್ರಾತಿನಿಧ್ಯ ನೀಡಬೇಕೆಂದು ರಾಜ್ಯ ಪೌರಕಾರ್ಮಿಕ ಮಹಾಸಂಘದ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮೇಯರ್ ನಾರಾಯಣ ಒತ್ತಾಯಿಸಿದರು.
ಪತ್ರಕರ್ತರ ಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ದಲಿತ ಸಮುದಾಯದ ಕಟ್ಟಕಡೆಯ ಪೌರಕಾರ್ಮಿಕ ವರ್ಗದ ಕನಿಷ್ಟ ಒಬ್ಬ ಪೌರಕಾರ್ಮಿಕ ಸದಸ್ಯರನನ್ನು ವಿಧಾನ ಪರಿಷತ್‍ಗೆ ನೇಮಕಗೊಳಿಸುವ ಮೂಲಕ ಸಾಮಾಜಿಕ ನ್ಯಾಯ ಹಾಗೂ ರಾಜಕೀಯ ಪ್ರಾತಿನಿಧ್ಯ ನೀಡಬೇಕು. ಈ ನಿಟ್ಟಿನಲ್ಲಿ ಎಲ್ಲಾ ಪಕ್ಷಗಳು ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಅಲ್ಲದೇ, ಗುತ್ತಿಗೆ ಪೌರಕಾರ್ಮಿಕರ ಕಾಯಂ ಗೊಳಿಸುವ ಬಗ್ಗೆ ಕಳೆದ ಕಾಂಗ್ರೆಸ್ ಸರ್ಕಾರ ನೀಡಿದ ವಾಗ್ಧಾನವನ್ನು ಕೂಡಲೇ ಸಮ್ಮಿಶ್ರ ಸರ್ಕಾರ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಹಾಗೂ ಐ.ಪಿ.ಡಿ ಸಾಲಪ್ಪನವರ ವರದಿ ಜಾರಿ, ಹೊಸ ನೇಮಕಾತಿ ನಿಯಮ ಕೈಬಿಡುವುದು, ನಿಗದಿತ ವೇತನ ಜಾರಿ, 50 ವರ್ಷ ಮೇಲ್ಪಟ್ಟವರಿಗೆ ಕಡ್ಡಾಯವಾಗಿ ಕಾಯಂಗೊಳಿಸುವುದು, ಒಳಚರಂಡಿ ಹಾಗೂ ಇತರೆ ಕಾರ್ಮಿಕರಿಗೆ ಉದ್ಯೋಗ ಭದ್ರತೆಯನ್ನು ಒದಗಿಸಬೇಕೆಂಬ ಬೇಡಿಕೆಗಳನ್ನು ಇತ್ತೀಚೆಗೆ ನಗರದಲ್ಲಿ ನಡೆದ ರಾಜ್ಯ ನಗರಪಾಲಿಕೆ, ನಗರಸಭೆ, ಪುರಸಭೆಗಳ ಪೌರಕಾರ್ಮಿಕರ ಮಹಾಸಂಘದ ಸಭೆಯಲ್ಲಿ ನಿರ್ಣಯಕೈಗೊಳ್ಳಲಾಗಿದ್ದು, ಇದರಂತೆ ರಾಜ್ಯ ಸಮ್ಮಿಶ್ರ ಸರ್ಕಾರವು ತಮ್ಮ ಬೇಡಿಕೆಯನ್ನು ಈಡೇರಿಸಬೇಕೆಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಎಂ.ಬಿ. ನಾಗನಗೌಡ, ಎನ್.ಮಾರ, ಶಿವಣ್ಣ, ಆರ್.ದಾಸು, ವಕೀಲರಾದ ಆರ್.ಲಕ್ಷ್ಮಣ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.







