ನಾಗಮಂಗಲ: ಸೇವೆ ಖಾಯಂ, ವೇತನ ಬಿಡುಗಡೆಗೆ ಆಗ್ರಹಿಸಿ ಪ್ರತಿಭಟನೆ

ನಾಗಮಂಗಲ, ಮೇ 28: ಪಂಚಾಯತ್ ನೌಕರರ ಸೇವೆ ಖಾಯಂ ಮತ್ತು ವೇತನ ಬಿಡುಗಡೆಯಾಗದಿರಲು ಪಿಡಿಓ ಮತ್ತು ತಾಪಂ ಇಓಗಳ ನಿರ್ಲಕ್ಷ್ಯ ಧೋರಣೆಯೆ ಮುಖ್ಯ ಕಾರಣವಾಗಿದೆ ಎಂದು ಗ್ರಾಮ ಪಂಚಾಯತ್ ನೌಕರರ ಸಂಘದ ಜಿಲ್ಲಾದ್ಯಕ್ಷ ಜಿ.ರಾಮಕೃಷ್ಣ ಗಂಭೀರ ಆರೋಪ ಮಾಡಿದ್ದಾರೆ.
ಸೇವೆ ಖಾಯಂ ಮತ್ತು ವೇತನ ಬಿಡುಗಡೆಗೆ ಆಗ್ರಹಿಸಿ ಗ್ರಾಮ ಪಂಚಾಯತ್ ನೌಕರರು ಪಟ್ಟಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮಾತನಾಡಿದ ಅವರು, ರಾಜ್ಯ ಸರಕಾರ ಗ್ರಾಮ ಪಂಚಾಯತ್ ನೌಕರರ ಸೇವೆ ಖಾಯಂ ಮಾಡಲು ಮತ್ತು ಅವರ ವೇತನವನ್ನು ಪ್ರತಿ ತಿಂಗಳ 5ನೇ ತಾರೀಖಿನಂದು ನೀಡುವಂತೆ ಸ್ಪಷ್ಟವಾಗಿ ಆದೇಶಿಸಿದೆ. ಆದರೆ, ಪಿಡಿಓ ಮತ್ತು ಇಓ ಅಧಿಕಾರಿಗಳು ಈ ಬಗ್ಗೆ ನಿರ್ಲಕ್ಷ್ಯವಹಿಸುತ್ತಿರುವುದರಿಂದ ನಮ್ಮ ಬೇಡಿಕೆಗಳು ಹೀಡೇರುತ್ತಿಲ್ಲ. ತಮಗೆ ಬೇಕಾದವರನ್ನು ಖಾಯಂ ಮಾಡುವ ಕುಮ್ಮಕ್ಕಿನಿಂದಲೇ ಅಧಿಕಾರಿಗಳು ನೌಕರರಿಗೆ ವಂಚಿಸುತ್ತಿದ್ದಾರೆ ಎಂದು ಆಕ್ರೋಶವ್ಯಕ್ತಪಡಿಸಿದರು.
ಕೆಲಸಕ್ಕೆ ಹಾಜರಾಗುತ್ತಿಲ್ಲ, ನೀರು ಸರಿಯಾಗಿ ಬಿಡುತ್ತಿಲ್ಲ, ಇತರೆ ಕಾರಣಗಳನ್ನು ಮುಂದಿಟ್ಟು ತಕ್ಷಣವೇ ನೌಕರರಿಗೆ ನೊಟೀಸ್ ನೀಡುವ ಪಿಡಿಓಗಳು, ವರ್ಷವಾದರೂ ಸಂಬಳ ನೀಡಿಲ್ಲ ಏಕೆ ಎಂದು ಅವರು ಪ್ರಶ್ನಿಸಿದರು. ತಾಲೂಕಿನಲ್ಲಿ 28 ಗ್ರಾಮ ಪಂಚಾಯತ್ ಗಳಲ್ಲಿ ಅಂಟೆಂಡರ್, ವಾಟರ್ ಮ್ಯಾನ್, ಕಂಪ್ಯೂಟರ್ ಆಪರೇಟರ್, ಬಿಲ್ ಕಲೆಕ್ಟರ್ ಗಳು, ಸ್ವೀಪರ್ ಗಳು ಸೇರಿ ಒಟ್ಟು 423 ನೌಕರರಿದ್ದು, ಇವರ ಸೇವೆ ಖಾಯಂ ಬಗ್ಗೆ ಮಾಹಿತಿಯನ್ನು ಪಿಡಿಓಗಳು ಸರಕಾರಕ್ಕೆ ವರದಿ ನೀಡದೆ ವಂಚಿಸುತ್ತಿದ್ದಾರೆ ಎಂದು ಅವರು ದೂರಿದರು. ಪಂಚಾಯತ್ ಗಳಲ್ಲಿ ನೌಕರರಿಗೆ ಆಗುತ್ತಿರುವ ಅನ್ಯಾಯಕ್ಕೆ ಅಧಿಕಾರಿಗಳೇ ನೇರ ಹೊಣೆಗಾರರಾಗಿದ್ದು ಸರಕಾರ ಶೀಘ್ರವೇ ನಮ್ಮ ಬೇಡಿಕೆಗಳನ್ನು ಹೀಡೇರಿಸುವಂತೆ ಒತ್ತಾಯಿಸಿದರು.
ಗ್ರಾಮ ಪಂಚಾಯತ್ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಸವರಾಜು, ಕಾರ್ಯದರ್ಶಿ ರಮೇಶ್, ಮುಖಂಡರಾದ ಸುಭಾಷ್, ಮಂಜೇಗೌಡ, ನಂಜುಂಡ ಪ್ರತಿಭಟನೆಯ ನೇತೃತ್ವವಹಿಸಿದ್ದರು.







