ಬಾಗೇಪಲ್ಲಿ: ಸೂಕ್ತ ಬಸ್ ನಿಲ್ದಾಣವಿಲ್ಲದೇ ಪರದಾಡುತ್ತಿರುವ ಪ್ರಯಾಣಿಕರು

ಬಾಗೇಪಲ್ಲಿ,ಮೇ.28: ತಾಲೂಕಿನ ಗೂಳೂರು ಗ್ರಾಮದಲ್ಲಿ ಬಸ್ ನಿಲ್ದಾಣವಿಲ್ಲದೆ ಪ್ರಯಾಣಿಕರು ಪರದಾಡುವಂತಾಗಿದ್ದು, ಇದರಿಂದ ಪ್ರಯಾಣಿಕರು ನಿದ್ದೆ ಬೋಗಿ ಮರವನ್ನು ಆಶ್ರಯಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ತಾಲೂಕು ಕೇಂದ್ರಕ್ಕೆ 8 ಕಿ.ಮಿ. ಇರುವ ಹಾಗೂ ಶಾಸಕರ ಸ್ವಂತ ಗ್ರಾ.ಪಂ ಆಗಿರುವ ಗೂಳೂರು ಗ್ರಾಮದಲ್ಲಿ ಬಸ್ ನಿಲ್ದಾಣವಿಲ್ಲದೇ ಪ್ರಯಾಣಿಕರು ಕಷ್ಟ ಅನುಭವಿಸುತ್ತಿದ್ದಾರೆ. ಸುಮಾರು 25-30 ವರ್ಷಗಳ ಹಿಂದೆ ಮಂಡಲ್ ಚೇರ್‍ಮನ್ ದಿ.ಶಿವಣ್ಣ ಅವರು ಪ್ರಯಾಣಿಕರಿಗಾಗಿ ತಂಗುದಾಣವನ್ನು ನಿರ್ಮಾಣ ಮಾಡಿದ್ದರು. ಆದರೆ ಈಗ ಪ್ರಯಾಣಿಕರ ಅನುಕೂಲಕ್ಕೆ ಇಲ್ಲದೆ ಈ ತಂಗುದಾಣ ಮಟ್ಕಾ ಮತ್ತು ಇಸ್ಪಿಟ್ ಆಡುವವರ ಆಶ್ರಯತಾಣವಾಗಿದೆ. ಇದು ಅನೈತಿಕ ಚಟುವಟಿಕೆಗಳ ವಾಸಸ್ಥಾನವೂ ಆಗಿದೆ ಎಂದು ಸಾರ್ವಜನಿಕರು ಆರೋಪಿಸುತ್ತಾರೆ.
ಗೂಳೂರು ಗ್ರಾಮದಿಂದ ಬಿಳ್ಳೂರು ಮೂಲಕ ನೆರೆಯ ಆಂದ್ರಪ್ರದೇಶದ ಅಮಡಗೂರು, ಕದಿರಿ ತಾಲೂಕುಗಳಿಗೆ ಸಂಪರ್ಕವಿದೆ. ಬಾಗೇಪಲ್ಲಿ ರಸ್ತೆ ಮೂಲಕ ಚಿಕ್ಕಬಳ್ಳಾಪುರ, ಬೆಂಗಳೂರು ನಗರ ಪ್ರದೇಶಗಳಿಗೆ ಪ್ರಯಾಣಿಕರು ಹೋಗಿ ಬರುತ್ತಿರುತ್ತಾರೆ. ಈ ಗ್ರಾಮದಲ್ಲಿ ಸರಿಯಾದ ಬಸ್ ನಿಲ್ದಾಣವಿಲ್ಲ, ಕುಡಿಯುವ ನೀರಿಲ್ಲ, ರಸ್ತೆಯ ಮದ್ಯದಲ್ಲಿರುವ ವಿದ್ಯುತ್ ಸಂಪರ್ಕ ಸೇರಿದಂತೆ ಇನ್ನೂ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಇದೇ ರಸ್ತೆಯ ಮೂಲಕ ಹಾದು ಹೋಗುತ್ತಿದ್ದರೂ ಇತ್ತ ಗಮನ ಹರಿಸುತ್ತಿಲ್ಲ. ಈಗಿರುವ ಹಳೆಯ ಕಾಲದ ತಂಗುದಾಣಲ್ಲಿ ಜೂಜು ಮತ್ತು ಮಟ್ಕಾ ಆಡುವವರು ಇಲ್ಲಿಯೇ ಮದ್ಯವನ್ನು ಸೇವಿಸಿ ಈ ತಂಗುದಾಣವನ್ನು ಆಕ್ರಮಿಸಿಕೊಂಡಿದ್ದಾರೆ. ಪ್ರಯಾಣಿಕರು ಬೇರೆ ದಾರಿಯಿಲ್ಲದೆ ನಿದ್ದೆ ಬೋಗಿ ಮರವನ್ನು ಆಶ್ರಯ ಪಡೆದು ತಮ್ಮ ಪ್ರಯಾಣ ಬೆಳೆಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ನಮ್ಮದೇ ಗ್ರಾಪಂ ವ್ಯಾಪ್ತಿಗೆ ಸೇರಿದ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅವರು ಕೂಡಲೇ ಮೂಲಭೂತ ಸಮಸ್ಯೆಗಳಿಗೆ ಸ್ಪಂದಿಸಬೇಕಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಗ್ರಾಮದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಹೊಸ ತಂಗುದಾಣ ಬೇಕಾಗಿದೆ. ಆದರೆ ಸರ್ಕಾರಿ ಸ್ಥಳ ಇಲ್ಲದೇ ಇರುವುದರಿಂದ ಪ್ರಯಾಣಿಕರ ಬಸ್ ನಿಲ್ದಾಣ ನಿರ್ಮಾಣ ಮಾಡಲು ಸಾಧ್ಯವಾಗುತ್ತಿಲ್ಲ. ಆದರೂ ಮತ್ತೊಂದು ಪ್ರಸ್ಥಾವನೆಯನ್ನು ಸಿದ್ಧಪಡಿಸಿ ಸರ್ಕಾರದ ಗಮನಕ್ಕೆ ತರುತ್ತೇನೆ.
-ವೆಂಕಟರವಣಪ್ಪ. ಪಂಚಾಯತ್ ಅಭಿವೃದ್ದಿ ಅಧಿಕಾರಿ, ಗೂಳೂರು.ಜನಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬಸ್ ನಿಲ್ದಾಣ ನಿರ್ಮಾಣ ಮಾಡಬೇಕಾಗಿದೆ. ನಿಗದಿತ ಸ್ಥಳದ ಕೊರತೆಯಿಂದ ವಿಳಂಬವಾಗುತ್ತಿದೆ. ಈ ಬಗ್ಗೆ ಶಾಸಕರ ಗಮನಕ್ಕೂ ತಂದಿದ್ದೇನೆ. ಶಾಸಕರೂ ಸಹ ನಿರ್ಮಣ ಮಾಡಿಕೊಡುತ್ತೇನೆ ಎಂದು ಭರವಸೆ ನೀಡಿದ್ದಾರೆ.
-ಮುನ್ನಾಖಾನ್. ಗೂಳೂರು ಗ್ರಾಪಂ ಅಧ್ಯಕ್ಷ.







