ಮುಖ್ಯಮಂತ್ರಿಯನ್ನು ಕೊಲ್ಲುವುದಾಗಿ ಜೈಲಿನಿಂದಲೇ ಬೆದರಿಕೆ ಹಾಕಿದ ಕೈದಿ!

ಭಟಿಂಡಾ, ಮೇ 29: ಪಂಜಾಬ್ ರಾಜ್ಯದ ಫರೀದ್ ಕೋಟ್ ಜೈಲಿನಲ್ಲಿನ ಕೈದಿಯೊಬ್ಬ ಜೈಲಿನೊಳಗಡೆಯಿಂದಲೇ ಅಪ್ಲೋಡ್ ಮಾಡಿರುವ 3 ನಿಮಿಷ ಅವಧಿಯ ವೀಡಿಯೋದಲ್ಲಿ ರಾಜ್ಯದ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ.
"ನಿಮ್ಮ ಕೊನೆಯ ದಿನಕ್ಕೆ ಕ್ಷಣಗಣನೆ ಆರಂಭವಾಗಿದೆ'' ಎಂದು ಗೋಬಿಂದ್ ಸಿಂಗ್ ಎಂಬ ಕೈದಿ ಈ ವೀಡಿಯೋದಲ್ಲಿ ಹೇಳಿದ್ದಾನಲ್ಲದೆ ಅಕಾಲ್ ಪ್ರಮುಖ್ (ದೇವರು) ತನಗೆ ಈ ಕರ್ತವ್ಯ ನೀಡಿದ್ದಾನೆಂದು ತಿಳಿಸಿದ್ದಾನೆ.
ಡಿಸೆಂಬರ್ 15, 2015ರಲ್ಲಿ ಮುಖ್ಯಮಂತ್ರಿ ಮಾಡಿದ್ದ ಸುಳ್ಳು ವಾಗ್ದಾನಕ್ಕೆ ಅವರು ಕ್ಷಮೆಯಾಚಿಸಬೇಕೆಂದೂ ಆತ ಹೇಳಿದ್ದಾನೆ. ಪಂಜಾಬ್ ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾಗ ಅಮರೀಂದರ್ ಸಿಂಗ್ ರಾಜ್ಯದಲ್ಲಿನ ಡ್ರಗ್ಸ್ ಹಾವಳಿಯನ್ನು ನಾಲ್ಕು ವಾರಗಳೊಳಗಾಗಿ, ಭ್ರಷ್ಟಾಚಾರವನ್ನು ಆರು ತಿಂಗಳೊಳಗಾಗಿ ಅಂತ್ಯಗೊಳಿಸುವುದಾಗಿ ವಾಗ್ದಾನ ಮಾಡಿದ್ದರು. ಗೋಬಿಂದ್ ತನ್ನ ವೀಡಿಯೋದಲ್ಲಿ ಮುಖ್ಯಮಂತ್ರಿಯ ಹೊರತಾಗಿ ರಾಜ್ಯ ಪೊಲೀಸ್ ಮುಖ್ಯಸ್ಥ ಸುರೇಶ್ ಅರೋರಾ, ಬಂದೀಖಾನೆ ಸಚಿವ ಸುಖ್ಜಿಂದರ್ ಸಿಂಗ್ ರಂಧವ ಅವರನ್ನೂ ನಿಂದಿಸಿದ್ದಾನಲ್ಲದೆ ಜೈಲಿನ ಅಧಿಕಾರಿಗಳು ಗುರು ಗ್ರಂಥ ಸಾಹಿಬ್ ಗೆ ಗೌರವ ಸಮರ್ಪಿಸಬೇಕೆಂದು ಹಾಗೂ ಈ ಪವಿತ್ರ ಗ್ರಂಥಕ್ಕೆ ಒಂದು ಆಸನವೊದಗಿಸಬೇಕೆಂದು ತಿಳಿಸಿದ್ದಾನೆ.
ಜೈಲಿನಲ್ಲಿ ನೀರು ಲಭ್ಯವಿಲ್ಲ ಎಂದು ದೂರಿರುವ ಆತ ರಾಜಕಾರಣಿಗಳು ಯುವಜನತೆಯನ್ನು ಡ್ರಗ್ಸ್ ದಾಸರನ್ನಾಗಿಸುತ್ತಾರೆ ಹಾಗೂ ಜೈಲಿನೊಳಗೂ ಡ್ರಗ್ಸ್ ದೊರೆಯುತ್ತಿದೆ ಎಂದು ಹೇಳಿದ್ದಾನೆ. ಭಟಿಂಡ ಜಿಲ್ಲೆಯ ಮರಿ ಭೈನಿ ಗ್ರಾಮದವನಾದ ಗೋಬಿಂದ್ ಎರಡು ಕೊಲೆ ಪ್ರಕರಣಗಳು ಹಾಗೂ ಒಂದು ಕೊಲೆಯತ್ನ ಪ್ರಕರಣದಲ್ಲಿ ವಿಚಾರಣಾಧೀನ ಕೈದಿಯಾಗಿದ್ದು ಜೈಲಿನಲ್ಲಿ ಎಪ್ರಿಲ್ ತಿಂಗಳಿನಿಂದಿದ್ದಾನೆ. ಆತನ ವಿರುದ್ಧ ಹಾಗೂ ವಿಡಿಯೋ ರೆಕಾರ್ಡ್ ಮಾಡಿದ ಸಹ ಕೈದಿ ಕುಲದೀಪ್ ಸಿಂಗ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಮಾನಸಿಕ ಅಸ್ಥಿರತೆ ಸಮಸ್ಯೆ ಎದುರಿಸುತ್ತಿರುವಂತೆ ಕಾಣುವ ಗೋಬಿಂದ್ ಗೆ ಮೊಬೈಲ್ ಫೋನ್ ಹೇಗೆ ದೊರೆಯಿತು ಹಾಗೂ ಆತ ವೀಡಿಯೋ ಹೇಗೆ ಅಪ್ಲೋಡ್ ಮಾಡಿದ ಎಂದು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.







